ವಿಜೃಂಭಣೆಯಿಂದ ನಡೆದ ‘ಕೊಡಿಯಾಲ್‌ ತೇರ್‌’

| Published : Feb 05 2025, 12:34 AM IST

ಸಾರಾಂಶ

ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮಂಗಳೂರು ರಥೋತ್ಸವ (ಕೊಡಿಯಾಲ್‌ ತೇರ್‌) ಸಡಗರ ಸಂಭ್ರಮದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮಂಗಳೂರು ರಥೋತ್ಸವ (ಕೊಡಿಯಾಲ್‌ ತೇರ್‌) ಸಡಗರ ಸಂಭ್ರಮದಿಂದ ನೆರವೇರಿತು. ಪ್ರಾತಃ ಕಾಲ ಮಹಾಪ್ರಾರ್ಥನೆ ಬಳಿಕ ಪ್ರಧಾನ ಶ್ರೀ ವೀರ ವೆಂಕಟೇಶ್ ದೇವರ ಸಹಿತ ಪರಿವಾರ ದೇವರುಗಳಿಗೆ ಶತಕಲಶಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕವು ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರಿಂದ ನೆರವೇರಿತು.

ಬಳಿಕ ಯಜ್ಞ ಮಂಟಪದಲ್ಲಿ ಪೂರ್ಣಾಹುತಿ, ಸಂಜೆ 5 ಗಂಟೆಗೆ ಶ್ರೀ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಿರಾಜಿಸಿ ರಥಾರೋಹಣ ಬಳಿಕ ಶ್ರೀಗಳಿಂದ ಪೂಜೆ ಪ್ರಸಾದ ವಿತರಣೆ ನಡೆಯಿತು. ರಾತ್ರಿ 11 ಗಂಟೆಗೆ ಸರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥವನ್ನು ಎಳೆಯುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.

ರಾತ್ರಿ ದೇವಳದ ಪ್ರಕಾರದಲ್ಲಿ ಪ್ರಾಕಾರೋತ್ಸವ ನಡೆದು ಬುಧವಾರ ಬೆಳಗ್ಗೆ ಅವಭ್ರಥೋತ್ಸವ (ಓಕುಳಿ) ನಡೆಯಲಿದೆ.

ಸಸಿಹಿತ್ಲು ಕಡಲ ತೀರದಲ್ಲಿ ಮೊಟ್ಟೆ ಇರಿಸಿದ ಅಪರೂಪದ ಕಡಲಾಮೆ:

ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ತೀರದಲ್ಲಿ ಅಳಿವಿನಚಿನ ಅತ್ಯಂತ ಅಪರೂಪದ ಒಲೀವ್ ರಿಡ್ಲೆ ಕಡಲಾಮೆಗಳು ಕಾಣಿಸಿಕೊಂಡಿವೆ. ಮಂಗಳೂರು ಕಡಲ ಕಿನಾರೆಗೆ ಬಂದು ಕಡಲಾಮೆ ಮೊಟ್ಟೆ ಇರಿಸಿವೆ.

ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರ ವಿಶೇಷ ನಿಗಾ ವಹಿಸಿದ್ದಾರೆ. ಈ ಹಿಂದೆ ಮಂಗಳೂರಿನ ಸುತ್ತ ಮುತ್ತ ಸುಮಾರು ೧೨ ಕಡೆ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಮಂಗಳೂರು ಕಡಲತಡಿಯ ತಣ್ಣೀರುಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಕಡಲಾಮೆಗಳು ಬರುತ್ತಿದ್ದವು.

ಅಳಿವಿನಂಚಿನಲ್ಲಿದ್ದ ಒಲೀವ್ ರಿಡ್ಲೆ ತಳಿಯ ಕಡಲಾಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ ೧ ರ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಲೀವ್ ರಿಡ್ಲೆ ಕಡಲಾಮೆಗಳ ವಿಶೇಷವೆಂದರೆ ತಾವು ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.