ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಗುರುವಾರ ಜರುಗಿತು.

ದೇಗುಲದ ಹಿರಿಯ ಅರ್ಚಕ ಕೆ.ಎನ್. ಗೋವಿಂದ ಅಡಿಗ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 10.45ರ ವೇಳೆಗೆ ಜೋಡಿ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವ ನಡೆಸಲಾಯಿತು.

ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ವಾರ್ಷಿಕ ಜಾತ್ರೆಯ ತೇರಿನ ವೈಭವಕ್ಕೆ ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು. ಪರಂಪರೆಯಂತೆ ರಥಬೀದಿಯ ಸಂಭ್ರಮದ ಉತ್ಸವಾಚರಣೆಯ ಬಳಿಕ ಶ್ರೀ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು. ದೇವಸ್ಥಾನದ ಖುತ್ವೀಜರಾದ ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ತಂತ್ರಿ ನಿತ್ಯಾನಂದ ಅಡಿಗ, ಅರ್ಚಕರಾದ ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ‌, ಮೂರ್ತಿ ಕಾಳಿದಾಸ್ ಭಟ್, ಸುರೇಶ್ ಭಟ್, ಶ್ರೀಶ ಭಟ್, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಇದ್ದರು.


ಹೂವಿನ ಅಲಂಕಾರ: ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬ್ರಹ್ಮರಥ ಸಾಗುವ ಸುಮಾರು ಮುಕ್ಕಾಲು ಕಿ.ಮೀ ದೂರದ ರಥ ಬೀದಿಯಲ್ಲಿ ಹೂವಿನ ಹಾಸುಗಳಿಂದ ಅಲಂಕರಿಸಲಾಗಿತ್ತು. ಹೂವಿನ ಅಲಂಕಾರವನ್ನು ಬೆಂಗಳೂರು ಉದ್ಯಮಿ ವೆಂಕಟೇಶ್ ಬೆಳ್ಳೂರು ಕ್ರಾಸ್ ಅವರು ಸೇವಾ ರೂಪದಲ್ಲಿ ನೀಡಿದ್ದರು.5 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. 6 ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, 7 ರಂದು ಡೋಲಾರೋಹಣೋತ್ಸವ, 8 ರಂದು ಪುಷ್ಪಮಂಟಪಾರೋಹಣೋತ್ಸವ, 9 ರಂದು ವೃಷಭಾರೋಹಣೋತ್ಸವ, 10 ರಂದು ಗಜಾರೋಹಣೋತ್ಸವ, 11 ರಂದು ಸಿಂಹಾರೋಹಣೋತ್ಸವಾಚರಣೆಗಳನ್ನು ನಡೆಸಲಾಗಿತ್ತು. ಉತ್ಸವದ ಅಂಗವಾಗಿ ದೇಗುಲದ ಆವರಣದಲ್ಲಿ ಪ್ರತಿದಿನ ಸಂಜೆ ದೇಶದ ವಿವಿಧ ಭಾಗದ ಕಲಾತಂಡಗಳು ಹಾಗೂ ಕಲಾವಿದರಿಂದ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶುಕ್ರವಾರ ಓಕುಳಿ ಹಾಗೂ ಅವಭೃತ ಸ್ನಾನ, ಶನಿವಾರ ಅಶ್ವರೋಹಣೋತ್ಸವ, ಧ್ವಜಾವರೋಹಣ ಮಹಾಪೂರ್ಣಾಹುತಿ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆ ನಡೆಯಲಿದೆ.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ್, ಡಾ.ಅಭಿಲಾಶ್ ಪಿ.ವಿ , ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್ , ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ್ ಪೂಜಾರಿ, ಕೆ.ಸುಧಾ, ಸುರೇಂದ್ರ ಶೆಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಸದಾಶಿವ ಪ್ರಭು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳಾದ ಎಸ್.ಪಿ.ಬಿ ಮಹೇಶ್, ಅರವಿಂದ್ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಮುತ್ತುರಾಜ್ ತುಂಬಿಗೆ, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ವೆಂಕಟೇಶ್ ಬೆಳ್ಳೂರ್‌‌ ಕ್ರಾಸ್, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಸದಾಶಿವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಚುಚ್ಚಿ ನಾರಾಯಣ ಶೆಟ್ಟಿ, ಜಯಂತಿ ವಿಜಯ್‌ಕೃಷ್ಣ, ರತ್ನ ರಮೇಶ್ ಕುಂದರ್, ಪ್ರಮುಖರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಿಯಾಂಕಾ ವಿ ಸುನೀಲ್ ಕುಮಾರ್, ಅನುರಾಧಾ ಗುರುರಾಜ್ ಗಂಟಿಹೊಳೆ, ವಾಸುದೇವ ಶೆಟ್ಟಿ ಕಾಪು, ಶಿವರಾಮಕೃಷ್ಣ ಭಟ್, ಶರತ್‌ಕುಮಾರ ಶೆಟ್ಟಿ ಉಪ್ಪುಂದ, ರೋಹಿತ್ ಕುಮಾರ್ ಶೆಟ್ಟಿ ಸಿದ್ದಾಪುರ, ಕರುಣಾಕರನ್ ಬೇಕಲ್, ಮಹೇಶ್ ಪೂಜಾರಿ ಕೋಡಿ, ದೇಗುಲದ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಇದ್ದರು.

ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕರಾದ ಜಯರಾಂ ಗೌಡ, ಶಿವಕುಮಾರ, ಸಂತೋಷ್ ಕಾಯ್ಕಿಣಿ, ಉಪ ನಿರೀಕ್ಷಕರುಗಳಾದ ವಿನಯ್ ಕೊರ್ಲಹಳ್ಳಿ, ಭೀಮಾಶಂಕರ, ನಿರಂಜನ್ ಗೌಡ, ಪವನ್ ನಾಯಕ್, ಸುಧಾರಾಣಿ, ಅನೂಪ್ ನಾಯಕ್ , ಪುಷ್ಪಾ, ಸುಧಾ ಪ್ರಭು ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.