ಕನ್ನಡಪ್ರಭ ವಾರ್ತೆ ಹಾಸನ
ತನ್ನ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕಾಂಗ್ರೆಸ್ ಮುಖಂಡನನ್ನು ರಕ್ಷಿಸುವ ದುರುದ್ದೇಶದಿಂದ ಪೊಲೀಸರೇ ತನ್ನ ಪತ್ನಿಯನ್ನು ಬಲವಂತವಾಗಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಆಕೆಯಿಂದ ದೂರು ಪಡೆದು ನಮ್ಮ ನೆರವಿಗೆ ಬಂದಿದ್ದ ವಕೀಲರನ್ನೇ ಹನಿಟ್ರ್ಯಾಪ್ ಕೇಸ್‌ನಡಿ ಸಿಲುಕಿಸಿದ್ದಾರೆ. ಈ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಸಂತ್ರಸ್ತೆಯ ಪತಿ ಶಮಂತ್ ಮನವಿ ಮಾಡಿದ್ದಾರೆ. ನ್ಯಾಯ ಕೋರಿ ಬಂದ ಮಹಿಳೆಯನ್ನೇ ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮಾಡಲು ಹೋದ ವಕೀಲೆಯನ್ನು ಪೊಲೀಸರು ಬಂಧಿಸಿದ್ದ ಘಟನೆ ಹೊಳೆನರಸೀಪುರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ತನ್ನ ಮೇಲೆ ಅತ್ಯಾಚಾರ ನಡೆಯದಿದ್ದರೂ ನಡೆದಿದೆ ಎಂದು ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ಹನಿಟ್ರ್ಯಾಪ್ ಕೇಸ್ ನೀಡುವಂತೆ ತನ್ನನ್ನು ಒತ್ತಾಯಿಸಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆ ಸಂಬಂಧ ವಕೀಲೆ ನಾಗಲಕ್ಷ್ಮೀ ಹಾಗೂ ಲ್ಯಾಬ್ ಟೆಕ್ನೀಷಿಯನ್ ಪಣಿ ಎಂಬುವವರ ಬಂಧನವಾಗಿತ್ತು. ಈ ಸಂಬಂಧ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ ಅಥವಾ ದೂರುದಾರ ಮಹಿಳೆಯ ಪತಿ ಶಮಂತ್, ತಾನು ಹೊಳೆನರಸೀಪುರ ಪಟ್ಟಣದ ಕುಂಬಾರ ಬೀದಿಯಲ್ಲಿ ವಾಸವಿದ್ದು, ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ. ಫೆಬ್ರವರಿ 13ರಂದು ಮಧ್ಯಾಹ್ನ ತಾನು ಕೆಲಸಕ್ಕೆ ತೆರಳಿದ್ದ ವೇಳೆ, ರಂಗೇನಹಳ್ಳಿ ಗ್ರಾಮದ ನಿವಾಸಿ ಹಾಗೂ ಕಾಂಗ್ರೆಸ್ ಮುಖಂಡ ಮಹಾದೇವ ಎಂಬ ವ್ಯಕ್ತಿ ಮನೆಗೆ ನುಗ್ಗಿ, ಮನೆಯಲ್ಲಿ ಒಬ್ಬಳೇ ಇದ್ದ ತನ್ನ ಪತ್ನಿಗೆ ಚಾಕು ತೋರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದರು.ಘಟನೆಯ ಶಬ್ಧ ಕೇಳಿದ ಪಕ್ಕದ ಮನೆಯವರು ತನಗೆ ಮಾಹಿತಿ ನೀಡಿದ್ದು, ತಾನು ತಕ್ಷಣ ಕೆಲಸ ಬಿಟ್ಟು ಮನೆಗೆ ಧಾವಿಸಿದೆ. ಮನೆಗೆ ಬಂದಾಗ ಪತ್ನಿ ಅತ್ಯಾಚಾರ ನಡೆದಿರುವುದಾಗಿ ತಿಳಿಸಿದ್ದು, ಬಳಿಕ ಫೆಬ್ರವರಿ 14ರಂದು ವಕೀಲರಾದ ನಾಗಲಕ್ಷ್ಮೀ ಮತ್ತು ಅವರ ಪತಿ ಸಿದ್ದೀಕ್ ಅಹಮ್ಮದ್ ಅವರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸದೇ ಹಿಂದೇಟು ಹಾಕಿದ್ದಾರೆ. ತನ್ನ ಪತ್ನಿಯನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ನಂತರ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪತ್ನಿಯೊಂದಿಗೆ ಕುಟುಂಬದವರ ಸಂಪರ್ಕಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಶಮಂತ್ ಆರೋಪಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರ ಒತ್ತಡದಿಂದ ಪೊಲೀಸರು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಪರವಾಗಿ ನಿಂತ ವಕೀಲರಾದ ನಾಗಲಕ್ಷ್ಮೀ ಅವರ ವಿರುದ್ಧ ಸುಳ್ಳು ಆರೋಪದಡಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಈ ಪ್ರಕರಣವನ್ನು ಉನ್ನತಾಧಿಕಾರಿಗಳು, ವಿಶೇಷವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ) ಸ್ವಯಂಪ್ರೇರಿತವಾಗಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನಿರಪರಾಧಿಗಳ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕು ಹಾಗೂ ಸಾಂತ್ವನ ಕೇಂದ್ರದಲ್ಲಿರುವ ಪತ್ನಿಯನ್ನು ಕುಟುಂಬದವರಿಗೆ ಒಪ್ಪಿಸಬೇಕು ಎಂದು ಶಮಂತ್ ಮನವಿ ಮಾಡಿದರು. ನನಗೆ ನ್ಯಾಯ ಏನಾದರೂ ಸಿಗದಿದ್ದರೇ ಇದಕ್ಕೆ ಸಂಬಂಧಪಟ್ಟ ಎಲ್ಲಾರ ಹೆಸರು ಬರೆದಿಟ್ಟು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶಮಂತ್ ಅವರ ತಾಯಿ ಮೀನಾಕ್ಷಿ ಕೂಡ ಉಪಸ್ಥಿತರಿದ್ದರು.ಹನಿಟ್ರ್ಯಾಪ್ ಕೇಸಿನಡಿ ಬಂಧಿಸಲ್ಪಟ್ಟಿರುವ ವಕೀಲೆ ನಾಗಲಕ್ಷ್ಮೀ
ನ್ಯಾಯ ಕೋರಿ ಬಂದ ಮಹಿಳೆಯನ್ನೇ ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮಾಡಲು ಹೋದ ವಕೀಲೆಯನ್ನು ಪೊಲೀಸರು ಬಂಧಿಸಿದ್ದ ಘಟನೆ ಹೊಳೆನರಸೀಪುರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.