ಕನ್ನಡಪ್ರಭ ವಾರ್ತೆ, ತುಮಕೂರುಪ್ರತಿದಿನ ರಸಾಯನಶಾಸ್ತ್ರವು ಹೊಸ ಆಯಾಮಗಳನ್ನು ಪಡೆಯುತ್ತಿದೆ. ಒಂದು ಚಿಂತನೆಗೂ ಮತ್ತೊಂದು ಚಿಂತನೆಗೂ ವ್ಯತ್ಯಾಸವಿರುವುದು ಸಹಜ. ವಿಜ್ಞಾನದ ಶಕ್ತಿಯನ್ನು ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಎರಡಕ್ಕೂ ಬಳಸಬಹುದು. ಆದರೆ, ಕೆಮಿಸ್ಟ್ರಿಯನ್ನು ಕೇವಲ ಹಣಕ್ಕಾಗಿ ಬಳಸದೆ, ಸಮಾಜದ ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ ಹಿರಿಯ ವಿಜ್ಞಾನಿ ಪ್ರೊ. ಸಿ.ವಿ. ಯಲಮಗ್ಗಡ್ ಅವರು ತಿಳಿಸಿದರು.ನಗರದ ತುಮಕೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಸಾಯನ ವಿಜ್ಞಾನ ಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಎಂಬ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನೀರಿನ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ನೀರೇ ಇಲ್ಲ ಎಂದು ಕೊರಗುವುದಕ್ಕಿಂತ, ಕೆಮಿಸ್ಟ್ರಿ ಮೂಲಕ ಆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬತ್ತ ಸಂಶೋಧನೆಗಳು ನಡೆಯಬೇಕು. ಬೆಂಗಳೂರಿನಲ್ಲಿ ನೀರಿನ ಅಭಾವವಿದ್ದರೆ, ಮಂಗಳೂರಿನಲ್ಲಿ ನೀರು ಹೇರಳವಾಗಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಎಲ್ಲರಿಗೂ ತಲುಪುವಂತೆ ವಿಜ್ಞಾನದ ಮೂಲಕ ಸದ್ಬಳಕೆ ಮಾಡಿಕೊಳ್ಳುವುದನ್ನು ನಾವು ಅರಿಯಬೇಕು. ಬರಿ ಸರ್ಕಾರಗಳನ್ನು ದೂರುತ್ತಾ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ರಸಾಯನ ಶಾಸ್ತ್ರ ಇಂದು ನಿನ್ನಯದಲ್ಲ ಬದಲಿಗೆ ನಾಗರಿಕತೆ ಹುಟ್ಟಿದಾಗಿಂದಲೂ ಮಾನವನ ಜೊತೆಗೆ ಹಾಸುಹೊಕ್ಕಾಗಿದೆ. ನಮ್ಮ ಪೂರ್ವಜರು ಸಾಕಷ್ಟು ರೀತಿಯಲ್ಲಿ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದರು. ಆದರೆ ಅದು ಸಂಸ್ಕೃತ ಭಾಷೆಯಲ್ಲಿ ಇದ್ದುದರಿಂದ ಸಾಮಾನ್ಯರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಕಾಲಗಳು ಬದಲಾದಂತೆ ರಸಾಯನ ಶಾಸ್ತ್ರವೂ ಸಾಕಷ್ಟು ಬದಲಾವಣೆ ಹೊಂದಿದ್ದು ಇಂದಿನ ಎಲ್ಲ ಸಮಸ್ಯೆಗಳು ಹಾಗೂ ರೋಗಗಳಿಗೂ ಸಹ ರಸಾಯನ ಶಾಸ್ತ್ರ ಉತ್ತರವಾಗಬಲ್ಲದು. ಆದರೆ ಅದನ್ನು ನಾವು ಅನುಸರಿಸಿಕೊಂಡು ಹೋಗಬೇಕಿರುವುದು ಮುಖ್ಯ ಎಂದರು. ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಎಂ. ಮಾತನಾಡಿ, ಕೆಮಿಸ್ಟ್ರಿ ಎಂಬುದು ಒಂದು ನಿಗೂಢ (ಮಿಸ್ಟ್ರಿ). ವಿದ್ಯಾರ್ಥಿಗಳು ತಾವು ಇಷ್ಟಪಟ್ಟ ವಿಷಯದಲ್ಲಿ ಏಕಾಗ್ರತೆ ಮತ್ತು ಕಠಿಣ ಶ್ರಮದಿಂದ ಸಾಧನೆ ಮಾಡಬೇಕು. ಸಮಾಜಕ್ಕೆ ನಿಮ್ಮ ಕೊಡುಗೆ ಏನು ಎಂಬುದೇ ಮುಖ್ಯ. ವಿಶ್ವವಿದ್ಯಾನಿಲಯದಲ್ಲಿ ಪಡೆಯುವ ಜ್ಞಾನವು ಸಮಾಜದ ಏಳಿಗೆಗೆ ಪೂರಕವಾಗಿರಬೇಕು ಎಂದರು.ರಸಾಯನಶಾಸ್ತ್ರವು ವಿಜ್ಞಾನದ ಕೇಂದ್ರಬಿಂದು. ಕೆಲವರು ಸಮಸ್ಯೆಗಳನ್ನು ಗುರುತಿಸಿದರೆ, ಇನ್ನು ಕೆಲವರು ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಪ್ರತಿಯೊಬ್ಬರ ಆಲೋಚನೆಗಳು ಮುಕ್ತವಾಗಿರಲಿ. ಜ್ಞಾನವನ್ನು ಹಂಚಿಕೊಳ್ಳುವುದರಿಂದ ಅದು ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಶ್ರೀನಿವಾಸ, ರಸಾಯನ ಶಾಸ್ತ್ರದ ಎಲ್ಲಾ ವಿಭಾಗದ ಅಧ್ಯಕ್ಷರಾದ ಡಾ. ಅರುಣಾ ಕುಮಾರ್ ಡಿ.ಬಿ., ವಿಭಾಗದ ಮುಖ್ಯಸ್ಥೆ ಡಾ. ನಿರ್ಮಲಾ ಬಿ., ಸಾವಯವ ರಸಾಯನಶಾಸ್ತ್ರ ಡಿ.ಒ.ಎಸ್.ಆರ್ ಅಧ್ಯಕ್ಷ ಡಾ. ಸುರೇಶ್ ಡಿ., ಹಾಗೂ ಅಧ್ಯಾಪಕರಾದ ಪ್ರೊ. ಪ್ರಕಾಶ್ ಸೇಠ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ರಸಾಯನ ವಿಜ್ಞಾನ ಸಮಾಜದ ಹಿತಕ್ಕೆ ಬಳಕೆಯಾಗಲಿ
ಕೆಮಿಸ್ಟ್ರಿಯನ್ನು ಕೇವಲ ಹಣಕ್ಕಾಗಿ ಬಳಸದೆ, ಸಮಾಜದ ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ ಹಿರಿಯ ವಿಜ್ಞಾನಿ ಪ್ರೊ. ಸಿ.ವಿ. ಯಲಮಗ್ಗಡ್ ಅವರು ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.