ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಬೋಧನಾ ವಿಧಾನ ಬದಲಿಸಿಕೊಳ್ಳಿ, ಶಾಲಾ ಹಂತದಲ್ಲೇ ಕ್ರಿಯಾಯೋಜನೆ ಮಾಡಿಕೊಳ್ಳಿ, ವಿಶೇಷ ತರಗತಿಗಳನ್ನು ನಡೆಸಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.ನಗರದ ಹೊರವಲಯದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ನಡೆದ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ರಿಯಾಯೋಜನೆ ತಯಾರಿಸಿ
ಕಳೆದ ಸಾಲಿಗಿಂತ ಫಲಿತಾಂಶ ಕುಸಿತವಾಗಲು ಕಾರಣ ಹುಡುಕಿ, ಅದನ್ನು ಸರಿಪಡಿಸಿಕೊಳ್ಳಲು ಮಾಡಬೇಕಾದ ಕೆಲಸಗಳ ಕುರಿತು ಕ್ರಿಯಾಯೋಜನೆ ಶಾಲಾ ಹಂತದಲ್ಲೇ ತಯಾರಿಸಿಕೊಳ್ಳಿ ಎಂದು ಸೂಚಿಸಿದ ಅವರು, ಅಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ಶಾಲೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತು ದೃಢಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಜಿಲ್ಲೆಯ ಫಲಿತಾಂಶ ಉತ್ತಮಪಡಿಸುವ ಕಾರ್ಯದಲ್ಲಿ ಶಿಕ್ಷಕರಲ್ಲಿ ಬದ್ದತೆ ಮೂಡಬೇಕು, ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸಿ, ಅದರಂತೆ ನಿಮ್ಮ ಬೋಧನಾ ವಿಧಾನದಲ್ಲಿ ಬದಲಾವಣೆ ತಂದುಕೊಳ್ಳಿ, ಮುಖ್ಯಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.ಇ-ಖಾತೆ ದಾಖಲೆ ವಿತರಣೆಇದೇ ಸಂದರ್ಭದಲ್ಲಿ ಶಾಲೆಗಳ ಇ-ಖಾತೆ ದಾಖಲೆಗಳನ್ನು ವಿತರಿಸಿದ ಅವರು, ಶಾಲೆಗೆ ಸಂಬಂಧಿಸಿದ ಆಸ್ತಿ ಶಾಲೆಯದ್ದೆ ಎಂಬುದನ್ನು ದೃಢಪಡಿಸಿಕೊಳ್ಳಿ, ಇ-ಖಾತೆ ಮಾಡಿಸಿ ಇಲ್ಲವಾದಲ್ಲಿ ನಂತರ ವಿನಾಕಾರಣ ವಿವಾದಗಳಿಗೆ ಅವಕಾಶ ನೀಡದಿರಿ ಎಂದು ತಿಳಿಸಿದರು.ಈಗಾಗಲೇ ಜಿಲ್ಲೆಯ ಶಾಲೆಗಳ ಇ-ಖಾತೆ ಮಾಡಿಕೊಡಲು ಪಿಡಿಒಗಳಿಗೆ ಸೂಚಿಸಲಾಗಿದೆ, ಅದರಂತೆ ಕ್ರಮವೂ ನಡೆದಿದೆ, ಉಳಿದ ಶಾಲೆಗಳ ಮುಖ್ಯಶಿಕ್ಷಕರು ಜವಾಬ್ದಾರಿ ವಹಿಸಿ ಇ-ಖಾತೆ ಮಾಡಿಸಿ ಅದರ ಪ್ರತಿಯನ್ನು ಶಾಲೆಯ ಗೋಡೆಗೆ ನೇತು ಹಾಕಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಸ್ತುತ ಸಾಲಿನಲ್ಲಿ ಕಳಪೆ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಅವರು, ಅಂತಹ ಶಾಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಡಿಡಿಪಿಐ ಅವರಿಗೆ ಸೂಚಿಸಿದರು. ೧೧೨ಸಹಾಯವಾಣಿ ಬಳಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಜಿಲ್ಲಾಧಿಕಾರಿ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಜಾಗಕ್ಕೆ ಇ-ಸ್ವತ್ತು ಮಾಡಿಸಿಕೊಡಲು ಕ್ರಮವಹಿಸಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದರು.ದೌರ್ಜನ್ಯ, ಲೈಂಕಿಕ ಕಿರುಕುಳ ಮತ್ತಿತರ ಸಮಸ್ಯೆಗಳು ಎದುರಾದಾಗ ೧೧೨ ಸಹಾಯವಾಣಿ ಬಳಸುವ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಈ ಸಂಖ್ಯೆಯನ್ನು ಶಾಲೆಯಲ್ಲಿ ಹಲವು ಕಡೆ ಬರೆಸಿ, ಜತೆಗೆ ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತಿತರ ಪಿಡುಗುಗಳ ನಿವಾರಣೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ನೈತಿಕ ಮೌಲ್ಯ ಬೆಳೆಸುವ ಮೂಲಕ ಅವರಲ್ಲಿ ಅಪರಾಧ ಮುಕ್ತ ಭಾವನೆ ಗಟ್ಟಿಗೊಳಿಸಿ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ, ಡಯಟ್ ಹಿರಿಯ ಉಪನ್ಯಾಸಕ ರಾಘವೇಂದ್ರ, ಕೌಶಲ್ಯ ಪ್ರಾಂಶುಪಾಲ ಗೋಪಾಲ್, ಜಿಲ್ಲಾಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುಂ, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿಲಕ್ಷ್ಮಯ್ಯ, ಮುನಿವೆಂಕಟರಾಮಾಚಾರಿ, ಚಂದ್ರಕಲಾ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಮುಖ್ಯಶಿಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ತಾಹೇರಾ ನುಸ್ರತ್, ಚಂದ್ರಪ್ಪ ಇದ್ದರು.