ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಕುಶಾವರ ಗ್ರಾಮದಲ್ಲಿ ನಡೆದ ಗ್ರಾಮಸ್ಥರು ಹಾಗೂ ಅಬಕಾರಿ ಅಧಿಕಾರಿಗಳ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಲಾಯಿತು.ತಾಲೂಕಿನ ಬಿಕ್ಕೋಡು ಹೋಬಳಿ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚಿಲ್ಲರೆ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗ್ರಾಮದ ನೆಮ್ಮದಿ ಹಾಳಾಗುವುದಲ್ಲದೆ ಅನೇಕ ಸಾವು ನೋವುಗಳು ಸಂಭವಿಸಿವೆ. ಮಧ್ಯ ಮಾರಾಟ ತಡೆಗಟ್ಟಲು ಮಂಗಳವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಕುಶಾವರ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಬಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ತೀರ್ಮಾನಿಸಲಾಯಿತು. ಕುಡುಕರ ಹಾವಳಿಯಿಂದ ಕೆಲವು ಗ್ರಾಮಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದುಡಿಯುವ ಅರ್ಧದಷ್ಟು ಹಣ ಎಣ್ಣೆ ಮಾರುವವರ ಕೈ ಸೇರುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕಡಿವಾಣ ಹಾಕಿ ಗ್ರಾಮದಲ್ಲಿ ಶಾಂತಿ, ನೆಮ್ಮದಿಯಿಂದ ಜೀವಿಸಲು ಅವಕಾಶ ಮಾಡಿಕೊಡಬೇಕೆಂದು ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೌರಿ ರೇಣುಕುಮಾರ್, ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಾವುದೇ ಭಯವಿಲ್ಲದೆ ನಡೆಯುತ್ತಿದೆ. ಯುವಕರು ಕುಡಿತಕ್ಕೆ ದಾಸರಾಗಿ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ಮಾತ್ರ ಅಕ್ರಮ ಮದ್ಯ ಮಾರಾಟಗಾರರು ಯಾರೆಂದು ತಿಳಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ರಾಜಾರೋಷವಾಗಿ ಮಾರಾಟ:

ಈಗಾಗಲೇ ಕುಶಾವರ, ಚೌಡನ ಹಳ್ಳಿ, ಕೌರಿ ಗ್ರಾಮಗಳಲ್ಲಿ ಮಿತಿಮೀರಿದ್ದು ಚಿಲ್ಲರೆ ಅಂಗಡಿ ನಡೆಸುತ್ತಿರುವವರು ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಅಥವಾ ಮೌಖಿಕವಾಗಿ ಗ್ರಾಮಸ್ಥರು ದೂರು ನೀಡಿದರೆ ದೂರುದಾರರ ಹೆಸರನ್ನು ಬಹಿರಂಗಪಡಿಸಿ ಗ್ರಾಮದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಿದೆ. ಕೂಡಲೇ ಅಂಥವರನ್ನು ಬಂಧಿಸಿ ಎಂದು ಸಭೆಯಲ್ಲಿ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ ನಿರ್ಲಕ್ಷ್ಯ:

ರಾತ್ರಿ ವೇಳೆ ಬರುವ ಬೀಟ್ ಸಿಬ್ಬಂದಿ ಮಧ್ಯ ಮಾರಾಟ ಕಂಡರೂ ಸಹ ಯಾವುದೇ ರೀತಿ ಗಮನ ಹರಿಸದೆ ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಕಾಟಾಚಾರದ ಸೇವೆ ನೀಡುತ್ತಿದ್ದಾರೆ. ಮೊದಲು ಅಂತಹ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ಡಿವೈಎಸ್ಪಿ ರಘು ಈ ಭಾಗದ ಹಳ್ಳಿಗಳಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಇಲಾಖೆ ಸನ್ನದ್ಧವಾಗಿದ್ದು ಇಂದಿನಿಂದಲೇ ಕಾರ್ಯಾಚರಣೆ ನಡೆಸಲಿದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳಾದ ಪರಮಶಿವಯ್ಯ ಪ್ರಮೀಳಾ ಬೇಲೂರು ಪಿಎಸ್ಐ ಪಾಟೀಲ್ ಪಿಡಿಒ ರಿಹಾನ್ ಪಾಷಾ, ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ, ಕೆಆರ್‌ಎಸ್‌ ಪಕ್ಷದ ಅಧ್ಯಕ್ಷ ಆದೇಶ್‌, ಶೇಷಾದ್ರಿ, ಗ್ರಾಮಸ್ಥರಾದ ಕೌಶಿಕ್ ಹರ್ಷವರ್ಧನ್, ವೀರೇಂದ್ರ, ಲೋಕೇಶ್, ರುದ್ರೇಶ್, ಕಾವ್ಯ, ವೇದಾ ಸೇರಿದಂತೆ ಇತರರು ಹಾಜರಿದ್ದರು.