ಸಾರಾಂಶ
ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಮ್ಮ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ. ಅಂತಹ ಮಹಾನ್ ಶಿವಶರಣರಲ್ಲಿ ವಚನ ಸಾಹಿತ್ಯ ರಕ್ಷಕ ಮಡಿವಾಳ ಮಾಚಿದೇವರು ಶ್ರೇಷ್ಠ ದಾರ್ಶನಿಕರು. ಅವರ ತತ್ವಾದರ್ಶಗಳು ಎಲ್ಲರಿಗೂ ಇಂದು ದಾರಿ ದೀಪವಾಗಬೇಕಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿಯ ಸಂಭಾಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುರುವಾರ ಬೆಳಿಗ್ಗೆ ಏರ್ಪಡಿಸಿದ್ದ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷನನ್ನು ಸಂಹಾರ ಮಾಡಿ ಅತೀ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಸಭೆಯೊಳಗೆ ಬರುವಾಗ ಆತನ ವಸ್ತ್ರ ಶಿವಶರಣರಿಗೆ ತಾಗುತ್ತದೆ. ಈ ತಪ್ಪಿಗೆ ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶಿವಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷಮುಕ್ತನಾಗಿ ಬರುವಂತೆ ಶಿವನು ಆದೇಶ ನೀಡುತ್ತಾನೆ. ಶಿವನ ಆದೇಶದಂತೆ ಹುಟ್ಟಿದ ದೈವಾಂಶ ಸಂಭೂತ ಈ ಮಡಿವಾಳ ಮಾಚಿ ದೇವರು ಎಂದರು.
ಮಡಿವಾಳ ಮಾಚಿದೇವರ ವಚನಗಳನ್ನು ಅವಲೋಕಿಸಿದಾಗ ಅವರೊಬ್ಬ ಅಪಾರ ಜ್ಞಾನ ಸಂಪನ್ನರೆಂದು ತಿಳಿಯುತ್ತದೆ. ಲಿಂಗವಂತ ತತ್ವನಿಷ್ಠ ಆಚರಣೆಗಳ ಪಾಲಕ, ಪ್ರಾಣಿ ಹಿಂಸೆ, ಪರನಿಂದೆ ದ್ವೇಷಕ, ಶ್ರೀರಕ್ಷಕ, ವಿಶ್ವಪ್ರೇಮಿ ವ್ಯಕ್ತಿತ್ವ ಹೊಂದಿದ್ದಾರೆ. ಇವರ ಗುರು ಮಲ್ಲಿಕಾರ್ಜುನ ಸ್ವಾಮಿ ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಅಕ್ಷರ, ಜ್ಞಾನ, ಸಕಲ ಶಾಸ್ತ್ರಗಳನ್ನು ಹೇಳಿಕೊಟ್ಟ ಕ್ರಾಂತಿಕಾರಿ ಗುರುವಿನ ಶಿಷ್ಯರಾಗಿದ್ದರಿಂದಲೇ ಮಡಿವಾಳ ಮಾಚಿದೇವರು ಶರಣ ಸಾಮಾಜಿಕ ಸುಧಾರಣೆ ಚಳವಳಿಯ ದಂಡನಾಯಕರಾಗಿದ್ದಾರೆ. ಸಾಮಾಜಿಕ ಹೊಣೆ ನಿರ್ವಹಿಸಿದ ಶರಣರ ವಚನ ಸಾಹಿತ್ಯವನ್ನು ರಕ್ಷಿಸಿದ ವೀರ ಶರಣ ಎಂಬ ಹೆಗ್ಗಳಿಕೆಗೆ ಪಾತ್ರರಗಿದ್ದಾರೆ ಎಂದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತೀ ಮಹತ್ವವಾದುದ್ದು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಡಿವಾಳ ಮಾಚಿ ದೇವರ ಶರಣಧರ್ಮ, ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕನಾಗಿ ಜವಬ್ದಾರಿ ಹೊತ್ತು ಚೆನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಶರಣ ಸಮೂಹದ ಬೆನ್ನಿಗೆ ರಕ್ಷೆಯಾಗಿ ನಿಂತು ಶರಣರನ್ನು ಮತ್ತು ವಚನ ಸಾಹಿತ್ಯವನ್ನು ರಕ್ಷಿಸಿದ ಮಹಾನ್ ಸಾಹಸಿ. ವಚನ ಸಾಹಿತ್ಯವನ್ನು ರಕ್ಷಣೆ ಮಾಡದೇ ಇದ್ದಿದ್ದರೆ ಶರಣ ಸಾಹಿತ್ಯಕ್ಕೆ ಜೀವಂತಿಕೆಯೇ ಇರುತ್ತಿರಲಿಲ್ಲ ಎಂದು ಹೇಳಿದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿ, ಮಡಿವಾಳ ಮಾಚಿ ದೇವರು ತಮ್ಮ ಜೀವಮಾನ ಪೂರ್ತಿ ಸ್ವಯಂ ಸುಧಾರಣೆ ಮತ್ತು ಸಾಮಾಜಿಕ ಸುಧಾರಣೆಗಳನ್ನು ಸಾಧಿಸಿ ತೋರಿಸಿದ ಸಿದ್ಧಪುರುಷರಾಗಿ, ವಚನ ಸಾಹಿತ್ಯ ರಕ್ಷಕರಾಗಿ, ಗುಣಾಚಾರ ಸಂಪನ್ನರಾಗಿ ಮತ್ತು ವೀರ ಶರಣರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಬಾಬು, ಮಡಿವಾಳ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಅಶೋಕ್ ಸಹ ಕಾರ್ಯದರ್ಶಿ ವೇದವ್ಯಾಸ, ದೇವರಾಜ್, ಸುರೇಶ್ ಕುಮಾರ್, ಉದ್ಯಮಿ ಆರ್. ಬಂಕಿಮ ಚಂದ್ರ, ಭೈರಪ್ಪ ಹಾಗೂ ಮಡಿವಾಳ ಸಮಾಜದ ಮುಖಂಡರು ಇದ್ದರು.
ತಾಲೂಕು ಕಚೇರಿಯ ಸಂಭಾಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುರುವಾರ ಬೆಳಿಗ್ಗೆ ಏರ್ಪಡಿಸಿದ್ದ ಮಡಿವಾಳ ಮಾಚಿ ದೇವರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು