ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲೆಯ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಜಟಾಪಟಿಗೆ ಕೊನೆಗೂ ತೆರೆ ಬಿದಿದ್ದು, ಡಿಆರ್ ಆದೇಶದ ಹಿನ್ನಲೆ ಅಧಿಕೃತವಾಗಿ ೫ ವರ್ಷಗಳ ಅವಧಿಗೆ ಚುನಾಯಿತರಾಗಿ ಆಯ್ಕೆಯಾಗಿದ್ದ ಪದಾಧಿಕಾರಿಗಳು ಆಡಳಿತ ಮಂಡಳಿ ಕಚೇರಿ ಪ್ರವೇಶಿಸಿ ಮತ್ತೆ ಕಾರ್ಯಾಭಾರ ಪ್ರಾರಂಭಿಸಿದ್ಧಾರೆ.ಕಳೆದ ಕೆಲ ದಿನಗಳ ಹಿಂದೆ ಆಡಳಿತ ಮಂಡಳಿಯಲ್ಲಿ ಒಂದಿಷ್ಟು ಗೊಂದಲಗಳು ಏರ್ಪಟ್ಟಿದ್ದ ಪರಿಣಾಮ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಎರಡೂ ಬಣದವರೂ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಇಂದು ನಿರ್ಬಂಧ ತೆರವುಗೊಂಡ ಹಿನ್ನೆಲೆಯಲ್ಲಿ ಪದಾಧಿಕಾರಿಗಳು ಬೀಗ ತೆರೆದು ಕಚೇರಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್. ಟಿ. ದೇವೇಗೌಡ ಹಾಗೂ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಅವರು, ದಿನಾಂಕ ೧೧-೦೧-೨೦೨೫ರಂದು ೨೦ಜನ ನಿರ್ದೇಶಕರ ಬೆಂಬಲದೊಂದಿಗೆ ಸರ್ವಾನುಮತದಿಂದ ೫ ವರ್ಷಗಳ ಅವಧಿಗೆ ನಾವು ಅಧ್ಯಕ್ಷರು-ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು, ಇದುವರೆಗೂ ಸಹಕಾರ ಸಂಘದ ರಿಜಿಸ್ಟರ್ ಅವರಿಂದ ಆಗಲೀ, ನ್ಯಾಯಾಲಯದಿಂದಾಗಲೀ ಅಥವಾ ಸರ್ಕಾರದಿಂದಾಗಲೀ ನಮ್ಮ ಆಡಳಿತ ಮಂಡಳಿಯನ್ನು ಪದಚ್ಯತಿಗೊಳಿಸಿರುವುದಾಗಿ ತೀರ್ಪು ಅಥವಾ ಆದೇಶ ಅಧಿಕೃತವಾಗಿ ಪ್ರಕಟವಾಗಿರುವುದಿಲ್ಲ. ಮುಂದುವರೆದು ಈ ಹಿಂದೆ ಸ್ವಯಂ ಘೋಷಿತ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ ಬಿ.ಆರ್. ಗುರುದೇವ್ ಅವರಿಗೆ ಹಾಸನ ಸಹಕಾರ ಸಂಘಗಳ ಉಪ ನಿಬಂಧಕರು ೧೩ಜನ ನಿರ್ದೇಶಕರು ಇರುವ ತಂಡ ಅಧಿಕಾರ ನಡೆಸಬಹುದೆಂದು ಅಭಿಪ್ರಾಯಿಸಿ ಹಿಂಬರಹ ನೀಡಿತ್ತು. ಅಭಿಪ್ರಾಯವನ್ನೇ ಆದೇಶವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದ ಗುರೇವ್ ಅವರು ನಾವು ಅಧಿಕಾರ ಸ್ವೀಕಾರ ಮಾಡುತ್ತಿದ್ದೇವೆಂದು ಸಂಘದ ಕಚೇರಿ ಬಳಿ ಬಂದು ಮಾದ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇವೆ. ಆದರೆ ನಂತರ ಈ ಬಗ್ಗೆ ಅವರಿಗೆ ಮನವರಿಕೆಯಾಗಿದ್ದು ಸಹಕಾರ ಇಲಾಖೆ ಉಪನಿಬಂಧಕರಿಗೆ ಅಭಿಪ್ರಾಯವನ್ನು ಆದೇಶ ಎಂದು ಮರು ಆದೇಶ ಮಾಡಿ ನೀಡುವಂತೆ ಮನವಿ ಸಲ್ಲಿಸಿದ ವೇಳೆ ಹಾಸನ ಸಹಕಾರ ಸಂಘಗಳ ಉಪ ನಿಬಂಧಕರು ಸದರಿ ವಿಷಯದ ಸಂಬಂಧ ನಿರ್ದೇಶಕರಿಗೆ ನಿರ್ದೇಶನ ನೀಡುವ ಅಥಾವ ಆದೇಶ ಮಾಡುವ ಯಾವುದೇ ಶಾಸನಬದ್ಧ ಅವಕಾಶ ಹಾಗೂ ಕಾನೂನು ರೀತ್ಯಾ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಹಿತ ದೃಷ್ಠಿಯಿಂದ ಚುನಾಯಿತ ಆಡಳಿತ ಮಂಡಳಿ ಇಂದಿನಿಂದ ಆಡಳಿತ ಮಂಡಳಿ ಕಚೇರಿ ಪ್ರವೇಶಿಸಿ ಕಾರ್ಯಾಭಾರ ಪ್ರಾರಂಭಿಸಿದ್ದೇವೆ ಎಂದರು.ನ್ಯಾಯಾಲಯದಲ್ಲಿ ಪ್ರಕರಣ ಇರುವ ಬಗ್ಗೆ ಮಾದ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ನಮ್ಮ ಆಡಳಿತ ಮಂಡಳಿಯನ್ನು ಅಧಿಕಾರದಲ್ಲಿ ಮುಂದುವರೆಸುವಂತೆ ಈಗಾಗಲೇ ಹಾಸನದ ಸಿವಿಲ್ ಜಡ್ಜ್ & ಜೆಎಂಎಫ್‌ಸಿ ನ್ಯಾಯಾಲಯ ಇಲ್ಲಿ ನಾವೇ ದಾವೆ ಹೂಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಒಂದು ವೇಳೆ ನ್ಯಾಯಾಲಯ ಅಥವಾ ರಿಜಿಸ್ಟರ್ ಅಥವಾ ಸರ್ಕಾರದಿಂದ ಆದೇಶ ಬಂದಲ್ಲಿ ಅದಕ್ಕೆ ತಲೆಬಾಗುತ್ತೇವೆ ಎಂದರು. ವಿಶ್ವಾಸದೊಂದಿಗೆ ಜೊತೆಗೆ ಹೋಗುತ್ತೇವೆ. ಸಂಘ ಸಂಸ್ಥೆಗಳು ಎಂದ ಮೇಲೆ ಈ ರೀತಿ ಸಣ್ಣ ಪುಟ್ಟ ಗೊಂದಲಗಳು ಸಹಜ, ಅಶೋಕ್ ಹಾರನಹಳ್ಳಿ ಅವರು, ಬಿ.ರ್.ಗುರುದೇವ್ ಎಲ್ಲರೂ ಜೊತೆಗೆ ಮುನ್ನೆಡೆಯುತ್ತೇವೆ. ಇಲ್ಲಿ ಅಧಿಕಾರ ಕಿತ್ತಾಟಕ್ಕಿಂತ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ತೊಂದರೆಯಾಗದಂತೆ ಸಂಸ್ಥೆ ಮುನ್ನೆಡೆಸಿಕೊಂಡು ಹೋಗಬೇಕೆಂಬುದೆ ನಮ್ಮ ಆಶಯ, ಈ ನಿಟ್ಟಿನಲ್ಲಿ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ ಎಂದರು.ಮಾಜಿ ಖಜಾಂಚಿ ವಿರುದ್ಧ ಅಸಮಧಾನ:
ಇದೇ ವೇಳೆ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಅಮಾನತ್ತುಗೊಂಡಿರುವ ಮಾಜಿ ಖಜಾಂಚಿ ಶ್ರೀಧರ್ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಈ ಗೊಂದಲಗಳ ನಡುವೆ ಸಂಸ್ಥೆಯ ವ್ಯಾಪ್ತಿಗೆ ಒಳಪಡುವ ೭ ಶಿಕ್ಷಣ ಸಂಸ್ಥೆಗಳ ಸಾವಿರಾರು ಉಪನ್ಯಾಸಕರುಗಳು, ಸಿಬ್ಬಂದಿ ವೇತನ ಸಿಗದೇ ವಂಚಿತರಾಗಿದ್ದರು. ಈ ನಡುವೆ ಉಪ ನಿಬಂಧಕರು ಈ ಪ್ರಕರಣದಲ್ಲಿ ಯಾವುದೇ ಆದೇಶ ಮಾಡಲು ತನಗೆ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನಲೆ ಮತ್ತೆ ಕಾರ್ಯಾರಂಭ ಪ್ರಾರಂಭಿಸಿರುವ ಆಡಳಿತ ಮಂಡಳಿ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ನೌಕರರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಲ್ಲಾ ೭ ಸಂಸ್ಥೆಗಳ ನೌಕರರ ವೇತವನ್ನು ಪಾವತಿಸಿದ್ದು, ಇದಕ್ಕೆ ಅಡ್ಡಗಾಲು ಹಾಕಿದ್ದ ಮಾಜಿ ಖಜಾಂಚಿ ಶ್ರೀಧರ್ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ತಪ್ಪ ತಪ್ಪು ಮಾಹಿತಿಗಳುಳ್ಳ ಮೂಗರ್ಜಿಗಳನ್ನು ಬರೆಯುವ ಮೂಲಕ ಆಡಳಿತಕ್ಕೆ ಅಡ್ಡಿ ಪಡಿಸುತ್ತಿದ್ದು, ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಪಾರ್ಶ್ವನಾಥ್, ಹಿರಿಯ ಉಪಾಧ್ಯಕ್ಷರಾದ ಚೌಡುವಳ್ಳಿ ಪುಟ್ಟರಾಜು, ನಿರ್ದೇಶಕರಾದ ಮುದ್ದೇಗೌಡರು, ಶ್ರೀನಿವಾಸ್, ನಾಗರಾಜ್ ಜೈನ್, ಶಂಕರ್, ರಾಜಶೇಖರ್, ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.