ದರ ಏರಿಕೆ ನಡುವೆ ರಂಗೇರಿದ ಮಾರುಕಟ್ಟೆ

| Published : Sep 30 2025, 12:00 AM IST

ದರ ಏರಿಕೆ ನಡುವೆ ರಂಗೇರಿದ ಮಾರುಕಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸಿಕ್‌ ಕೊಳ್ಳದಿರಿ ಮತ್ತು ಮಾರಾಟ ಮಾಡದಿರಿ ಎಂದು ನಗರಸಭೆ, ಜಿಲ್ಲಾಡಳಿತ ಎಷ್ಟೇ ಜಾಗೃತಿ ಮೂಡಿಸಿದರೂ, ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸಿಕ್‌ ಸಂಪೂರ್ಣವಾಗಿ ನಿಷೇಧವಾಗಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ರಾಜಾರೋಷವಾಗಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡಹಬ್ಬ ದಸರಾಗೆ ಖರೀದಿ ಭರಾಟೆ ಜೋರಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆ, ಎಂಜಿ ರಸ್ತೆಯ ಖಾಸಗಿ ಬಸ್ ನಿಲ್ದಾಣದಿಂದ ಅಬೇಡ್ಕರ್ ವೃತ್ತದವರೆಗೆ, ಬಿಬಿ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ, ಸಂತೆ ಮಾರುಕಟ್ಟೆ, ಬಜಾರ್ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆಗಳು ಕಳೆಗಟ್ಟಿವೆ.

ದಸರಾ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಹೂವು, ಬೂದುಗುಂಬಳ, ನಿಂಬೆಹಣ್ಣು ,ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ದಸರಾಗೆ ಪ್ರತಿ ವರ್ಷ ತಮಿಳುನಾಡು, ಆಂಧ್ರಪ್ರದೇಶದಿಂದ ಬರುವ ಬೂದಗುಂಬಳಕಾಯಿ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಗೊಂಡಿದೆ.

ತೆಂಗಿನ ಕಾಯಿ ಬೆಲೆ ₹120

ಪ್ರತಿ ಕೆಜಿಗೆ 15 ರಿಂದ 20 ರು.ಗಳ ವರೆಗೆ ಮಾರಾಟವಾಗುತ್ತಿದ್ದ ಬೂದಗುಂಬಳ, ಈಗ 40 ರಿಂದ 50 ರೂ.ಗೆ ಏರಿದೆ. ಒಂದು ಕಾಯಿಗೆ 80 ರೂ.ನಿಂದ 120 ರೂ.ವರೆಗೆ ಬೆಲೆ ಏರಿಕೆಯಾಗಿದೆ. ಹೂವಿನ ಬೆಲೆಯೂ ಬಾರಿ ಎರಿಕೆ ಕಂಡಿದೆ.ನಿಂಬೆಹಣ್ಣಿನ ದರದಲ್ಲೂ ಭಾರೀ ಏರಿಕೆಯಾಗಿದ್ದು, ಸಣ್ಣ ಗಾತ್ರದ್ದು 3 ರೂ., ದಪ್ಪ ಗಾತ್ರದ್ದು 5 ರೂ. ಇದೆ. ಬಾಳೆ ಕಂದು ಕೂಡ 100 ರೂ. ಗಡಿ ದಾಟಿದೆ. ದಸರಾಗೆ ಬೂದಗುಂಬಳ, ನಿಂಬೆಹಣ್ಣು ಸಹಜವಾಗಿ ಹೆಚ್ಚಾಗಿ ಖರೀದಿಸಲಾಗುವುದು.

ಹೀಗಾಗಿ, ಮಾರುಕಟ್ಟೆಗಳಲ್ಲಿ ಡಿಮ್ಯಾಂಡ್‌ ಹೆಚ್ಚಾಗಿಯೇ ಇದೆ. ಇನ್ನು, ಕಡ್ಲೆಪುರಿ ಒಂದು ಸೇರಿಗೆ 8 ರಿಂದ 12 ರೂ.ವರೆಗೆ ಮಾರಾಟವಾಗುತ್ತಿದೆ. ಗುರುವಾರದಿಂದಲೇ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆ ಕಂದು, ಬೂದುಗುಂಬಳ, ಕಡ್ಲೆಪುರಿ, ತೆಂಗಿನಕಾಯಿ ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಪ್ರಾರಂಭವಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ತರಕಾರಿ, ಬೂದಗುಂಬಳಕಾಯಿ, ಬಾಳೆ ಕಂದುಗಳು ರಾಶಿಗಟ್ಟಲೇ ಬಂದಿದ್ದು, ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.

ಹೂ- ಹಣ್ಣುಗಳೂ ದುಬಾರಿ

ಹೂ ಮತ್ತು ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದು, ಕನಕಾಂಬರ ಕೆ.ಜಿ.ಗೆ 1,200 ರೂ., ಮಲ್ಲಿಗೆ 800 ರೂ., ಸೇವಂತಿಗೆ 250-300 ರೂ., ಮಳ್ಳೆ ಹೂವು 800 ರೂ., ಕಾಕಡ 400 ರೂ., ಗುಲಾಬಿ 400 ರೂ., ಸುಗಂಧ ರಾಜ 300 ರೂ. ಇದ್ದು, ಆಪಲ್ ಬಿಟ್ಟರೆ ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡಿದೆ.ಮೊಸಂಬಿ 80-100 ರೂ. ಸೇಬು 100-120 ರೂ.ದ್ರಾಕ್ಷಿ 120-200 ರೂ.ದಾಳಿಂಬೆ 100-200 ರೂ. ಏಲಕ್ಕಿ ಬಾಳೆ 80-100 ರೂ.ಪಚ್ಚಬಾಳೆ 40-60 ರೂ.ಪೈನಾಪಲ್‌ 80-100 ರೂ.ಸೀಬೆ-70-100ರೂ.ಡ್ರಾಗನ್ ಪ್ರೂಟ್- 200-250 ರೂ.ಸಪೋಟಾ-60-90ರೂ.ಗಳಿಗೆ ಮಾರಾಟವಾಗುತ್ತಿತ್ತು.

ಆಯುಧಪೂಜೆ ಮತ್ತು ವಿಜಯದಶಮಿದಿನಗಳಂದೇ ಮಾರುತಿ ಸುಜುಕಿ, ನೆಕ್ಸಾ, ಸುಜುಕಿ, ಟಾಟಾ,ಮಹೇಂದ್ರ, ಟೊಯೋಟಾ ಗಳ ಕಾರ್ ಶೋರೂಂಗಳಲ್ಲಿ ಪ್ರತಿ ಶೋರೂಂ ಕನಿಷ್ಠ 20 ರಿಂದ 50 ಕಾರ್‌ಗಳನ್ನು ಡಿಲಿವರಿ ಮಾಡಬೇಕಿದೆ ಎನ್ನುತ್ತಾರೆ ಕಾರ್ ಶೋರೂಂ ಎಕ್ಸಿಕ್ಯೂಟೀವ್ ಪ್ರತಿನಿಧಿಗಳು.

ಪ್ಲಾಸ್ಟಿಕ್‌ ಬ್ಯಾಗ್‌ಗಳ ಹಾವಳಿ

ಪ್ಲಾಸಿಕ್‌ ಕೊಳ್ಳದಿರಿ ಮತ್ತು ಮಾರಾಟ ಮಾಡದಿರಿ ಎಂದು ನಗರಸಭೆ, ಜಿಲ್ಲಾಡಳಿತ ಎಷ್ಟೇ ಜಾಗೃತಿ ಮೂಡಿಸಿದರೂ, ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸಿಕ್‌ ಸಂಪೂರ್ಣವಾಗಿ ನಿಷೇಧವಾಗಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ರಾಜಾರೋಷವಾಗಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಮಧ್ಯೆ ನಗರದಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಸವಾಲಾಗಿದೆ.