ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದಲ್ಲಿ ತಾಂತ್ರಿಕ ಕಾರಣದಿಂದ ಅಪೂರ್ಣಗೊಂಡಿರುವ ಕುವೆಂಪು ಭವನವನ್ನು ಆದಿ ಚುಂಚನಗಿರಿ ಮಠಕ್ಕೆ ವಹಿಸಲಾಗಿದ್ದು, ಕೂಡಲೇ ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ಸಮಾಜದ ಎಲ್ಲಾ ಕಾರ್ಯಕ್ರಮಗಳು ಅಲ್ಲಿ ನಡೆಯುವಂತೆ ಶ್ರೀಶಂಭುನಾಥ ಸ್ವಾಮೀಜಿಯವರು ಗಮನಹರಿಸಬೇಕೆಂದು ಶಾಸಕ ಎ.ಮಂಜು ಅವರು ಮನವಿ ಮಾಡಿದರು.ಪಟ್ಟಣದ ಚಿಲುಮೆಮಠದ ಶ್ರೀಗುರು ವಿಜಯ ಸಿದ್ಧ ಶಿವದೇವ ಮಂಗಳ ಮಂದಿರದಲ್ಲಿ ನಡೆದ 132ನೇ ಗುರುತೋರಿದ ದಾರಿ -ತಿಂಗಳಮಾಮನ ತೇರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಒಕ್ಕಲಿಗ ಸಮಾಜದ ಕುವೆಂಪು ಭವನ ಕಾಮಗಾರಿ ನೆನಗುದಿಗೆ ಬಿದ್ದಿದೆ. ನನ್ನ ಅವಧಿಯಲ್ಲಿ ಲಕ್ಷಾಂತರ ರು. ಹಣವನ್ನು ಭವನಕ್ಕೆ ಕಲ್ಪಿಸಲಾಗಿದೆ. ಇನ್ನು ಸಾಕಷ್ಟು ಹಣದ ಅವಶ್ಯಕತೆ ಇದೆ. ನಾನು ಸೇರಿದಂತೆ ಇಡೀ ಸಮಾಜ ಭವನದ ಅಭಿವೃದ್ಧಿಗೆ ಕೈಜೋಡಿಸಲಿದೆ. ಮಠದ ಸುಪರ್ತಿಗೆ ನೀಡಲಾಗಿದ್ದು, ಉಳಿಕೆ ಕೆಲಸವನ್ನು ಕೂಡಲೇ ಪೂರ್ಣಗೊಳಿಸಿ ಮುಂದಿನ ಎಲ್ಲಾ ಸಮಾಜದ ಕಾರ್ಯಕ್ರಮಗಳು ನೂತನ ಭವನದಲ್ಲಿ ಆಗಬೇಕಿದೆ. ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.ಯುಗಯೋಗಿ ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರು ತೋರಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲವೂ ಸಾಗಬೇಕಿದೆ. ಅಲ್ಲದೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶ್ರೀಶಂಭುನಾಥ ಸ್ವಾಮೀಜಿ ಅವರು ಹಿರಿಯ ಸ್ವಾಮೀಜಿಯವರು ತೋರಿದ ದಾರಿಯಲ್ಲಿ ಇಡೀ ಸಮಾಜವನ್ನು ಭಕ್ತಿಮಾರ್ಗದಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಪ್ರತಿ ತಿಂಗಳು ನಡೆಯುವ ಗುರುತೋರಿದ ದಾರಿ-ತಿಂಗಳಮಾಮನ ತೇರು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಇಡೀ ಸಮಾಜವನ್ನು ಒಂದೆಡೆ ಸೇರಿಸುತ್ತಿರುವುದೇ ಜೀವಂತವಾಗಿದೆ. ತಮ್ಮ ವೈಯಕ್ತಿಕವಾದವನ್ನು ಮನೆಯಲ್ಲಿಯೇ ಬಿಟ್ಟು, ನಾವೆಲ್ಲರೂ ಒಟ್ಟಿಗೆ ಸೇರಿ ಮಠ ಮತ್ತು ಸಮಾಜದ ಅಭಿವೃದ್ಧಿಗೆ ಮುಂದಾಗೋಣ ಎಂದು ಮನವಿ ಮಾಡಿದರು.ಖ್ಯಾತ ವಾಗ್ಮಿ ಸುಧಾ ಬರಗೂರು ಅವರು ಬದುಕಿನ ಕಲೆ ಕುರಿತು ಮಾತನಾಡಿ, ಇಂದಿನ ಮಕ್ಕಳ ಚಲನವಲನಗಳನ್ನು ಅವಲೋಕಿಸಿದರೇ ತುಂಬಾ ಆತಂಕ ಮತ್ತು ಭಯ ಎದುರಾಗುತ್ತಿದೆ. ಇದಕ್ಕೆ ಕಾರಣ ಇಂದಿನ ಶಿಕ್ಷಣ ಪದ್ಧತಿಯೋ, ಮನೆಯಲ್ಲಿನ ಪೋಷಕರ ನಿರ್ಲಕ್ಷ್ಯವೋಯೋ ಹಾಗೂ ಸಮಾಜದ ದೃಷ್ಠಿಕೋನವೋ ಎಂಬುವ ಪ್ರಶ್ನೆ ಕಾಡುತ್ತಿದೆ. ಮಕ್ಕಳೇ ಮುಂದಿನ ಭವಿಷ್ಯದ ಪ್ರಜೆಗಳು ಎಂದು ಕರೆಯುವ ಸುದಂರ್ಭದಲ್ಲಿ ಪಾಠ ಹೇಳುವ ಮೇಷ್ಟ್ರು, ಮನೆಯ ಮೊದಲ ಗುರುಗಳಾದ ತಂದೆ ತಾಯಿಗಳು ಮಕ್ಕಳಿಗೆ ಸಮಾಜದ ಅಭ್ಯುದಯಕ್ಕೆ ಉತ್ತೇಜಿತವಾದ ಸಂಸ್ಕಾರಗಳನ್ನು ಕಲಿಸಬೇಕಿದೆ. ಕೇವಲ ಉದ್ಯೋಗ ಕಲ್ಪಿಸುವಂತಹ ಶಿಕ್ಷಣಕ್ಕಿಂತ ಬದುಕಿನ ಮೌಲ್ಯಗಳನ್ನು ನೀಡುವ ಶಿಕ್ಷಣ ಬೇಕಿದೆ. ಇದು ನಮ್ಮ ಗುರುಹಿರಿಯರು, ತಂದೆ ತಾಯಿಗಳಿಂದ ಮಾತ್ರ ಸಾಧ್ಯ. ಇದಕ್ಕೆ ಇಂದು ನಡೆಯುತ್ತಿರುವ ಗುರತೋರಿದ ದಾರಿ-ತಿಂಗಳಮಾಮನ ತೇರು ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಬಣ್ಣಿಸಿದರು.ಇಂದಿನ ಮಕ್ಕಳಿಗೆ ಕುಟುಂಬ ಎಂಬುವುದರ ಬಗ್ಗೆ ಕಿಂಚಿತ್ತು ಅರಿವು ಇಲ್ಲ. ಯಾಕೆಂದರೇ ಪೋಷಕರು ತಮ್ಮ ಕನಸನ್ನು ಭವಿಷ್ಯದ ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಪ್ರತಿ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಕೇವಲ ಎಂಜಿನಿಯರಿಂಗ್, ಮೆಡಿಕಲ್ ಪದವಿಯಿಂದ ಅಲ್ಲ. ಇಂದು ನಾವೆಲ್ಲರೂ ಶಿಕ್ಷಣವಂತರಾಗಿದ್ದೇವೆ ವಿನಃ ಪ್ರಜ್ಞಾವಂತರು, ವಿಚಾರವಂತರಾಗಿಲ್ಲ. ಇದರಿಂದ ಇಂದಿನ ಸಮಾಜದಲ್ಲಿ ಮತ್ತೊಷ್ಟು ಅಸಮಾನತೆ, ಅಂಧಕಾರ, ಮಾನವೀಯ ಮೌಲ್ಯಗಳಿಂದ ದೂರವಿದ್ದೇವೆ ಎಂದರು.ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ನಡೆಯುತ್ತಿರುವ 132ನೇ ತಿಂಗಳಮಾಮನ ತೇರು ಅತ್ಯಂತ ವಿಶೇಷತೆಯಿಂದ ಕೂಡಿದೆ. ಯಾಕೆಂದರೆ ಇದು ಅನಂತ ಹುಣ್ಣಿಮೆಯಾಗಿದೆ. ಇದು ಎಂದಿಗೂ ಅಂತಿಮವಾದುದಲ್ಲ. ಸದಾ ಮುಂದುವರಿಯುವ ಗುರುತೋರಿದ ದಾರಿಯಾಗಿದೆ. ಜೀವನದಲ್ಲಿ ಬೆಳಕನ್ನು ಕಾಣಬೇಕಾದರೇ ಭಗವಂತನ ಸ್ಮರಿಸಬೇಕಿದೆ. ಆದರೆ ನಾವು ಅಜ್ಞಾನದಿಂದ ಕೂಡಿ, ಬದುಕಿನಲ್ಲಿ ಜ್ಞಾನದ ಬೆಳಕನ್ನು ಕಂಡುಕೊಳ್ಳದೇ ಅಜ್ಞಾನಿಗಳಾಗಿದ್ದೇವೆ. ಜೀವನದಲ್ಲಿ ದೀರ್ಘಕಾಲ ಬಾಳುವುದನ್ನು ಎಲ್ಲರೂ ಕಲಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ, ಸ್ವಸ್ಥ ಸಮಾಜ ನಿರ್ಮಾಣ ವೇದಿಕೆ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ, ಬೆಮ್ಮತ್ತಿ ಸುರೇಶ್, ರಶ್ಮಿ, ಮೊಗಣ್ಣ, ಪ್ರಾಂಶುಪಾಲ ಮಹೇಶ್, ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.