ಒಬಿಸಿಗೆ ಅನ್ಯಾಯ: ಶಾಸಕ ಶಿವಗಂಗಾ ಕಪ್ಪುಬಟ್ಟೆ ಪ್ರತಿಭಟನೆ

| Published : Dec 14 2023, 01:30 AM IST

ಒಬಿಸಿಗೆ ಅನ್ಯಾಯ: ಶಾಸಕ ಶಿವಗಂಗಾ ಕಪ್ಪುಬಟ್ಟೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಅನಗತ್ಯ ಸಮಾವೇಶಗಳನ್ನು ಮಾಡುತ್ತಾರೆ. ಆದರೆ ಅರ್ಹರಿಗೆ ಸಾಲಸೌಲಭ್ಯ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ ಕೊಳವೆಬಾವಿಯಂತಹ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಸದಸ್ಯ ಬಸವರಾಜ ಶಿವಗಂಗಾ ಕಪ್ಪು ಶರ್ಟ್‌ ಧರಿಸಿ ಪ್ರತಿಭಟಿಸಿದ ಘಟನೆ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ, ವಿಧಾನಸಭೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಅನಗತ್ಯ ಸಮಾವೇಶಗಳನ್ನು ಮಾಡುತ್ತಾರೆ. ಆದರೆ ಅರ್ಹರಿಗೆ ಸಾಲಸೌಲಭ್ಯ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ ಕೊಳವೆಬಾವಿಯಂತಹ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಸದಸ್ಯ ಬಸವರಾಜ ಶಿವಗಂಗಾ ಕಪ್ಪು ಶರ್ಟ್‌ ಧರಿಸಿ ಪ್ರತಿಭಟಿಸಿದ ಘಟನೆ ಬುಧವಾರ ನಡೆಯಿತು.ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಸವರಾಜ ಶಿವಗಂಗಾ, ಬಿಳಿ ಶರ್ಟ್ ಧರಿಸಿ ಕಲಾಪಕ್ಕೆ ಬರಲು ಹೊರಟಿದ್ದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧರಣಿಗಾಗಿ ಕಪ್ಪು ಶರ್ಟ್‌ ಧರಿಸಿ ಬಂದಿದ್ದೇನೆ ಎಂದು ಹೇಳಿದರು.

ಈ ವೇಳೆ ಸ್ಪೀಕರ್‌ ಯು.ಟಿ. ಖಾದರ್‌, ಸದನಕ್ಕೆ ಕಪ್ಪು ಬಟ್ಟೆ ಧರಿಸಿ ಬರುವಂತಿಲ್ಲ. ಇನ್ನೊಮ್ಮೆ ಈ ರೀತಿ ಮಾಡಬೇಡಿ ಎಂದರು.

------------------

ಮಾತು ಮುಂದುವರೆಸಿದ ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 12 ಬೋರ್‌ವೆಲ್‌ ಹಾಗೂ 8 ಮಂದಿಗೆ ನೇರ ಸಾಲಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಏನು ಸಮಾಯಿಷಿ ನೀಡಬೇಕು? ಲಕ್ಷಾಂತರ ರು. ಖರ್ಚು ಮಾಡಿ ಉಪಯೋಗವಿಲ್ಲದ ಸಮಾವೇಶಗಳನ್ನು ಮಾಡುತ್ತೀರಿ. ಜನರಿಗೆ ಸೌಲಭ್ಯಗಳನ್ನು ಕೊಡಲು ನಿಮ್ಮ ಬಳಿ ಹಣ ಇರುವುದಿಲ್ಲವೇ? ಎಂದು ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಖಾದರ್, ಕೋಟ್ಯಂತರ ರು. ಖರ್ಚು ಮಾಡಿ ಶಾಸಕರಾಗುತ್ತೀರಿ. ನಿಮ್ಮ ಬಳಿ ಜನರಿಗೆ ಸೌಲಭ್ಯ ಕಲ್ಪಿಸಲು ಹಣ ಇರುವುದಿಲ್ಲವೇ ಎಂದು ಹೇಳಿದರು.

ಜತೆಗೆ ‘ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅರ್ಜಿ ಸಲ್ಲಿಸಿದವರಲ್ಲಿ ಶೇ.50 ರಷ್ಟು ಮಂದಿಗಾದರೂ ಸೌಲಭ್ಯ ಒದಗಿಸಲು ಪ್ರರಿಶೀಲಿಸಲಾಗುವುದು’ ಎಂದು ಉತ್ತರಿಸಿದ ಸಚಿವ ಶಿವರಾಜ್‌ ತಂಗಡಗಿ ಅವರನ್ನು ತಡೆದ ಸ್ಪೀಕರ್‌, ‘ನೀವು ಭರವಸೆ ನೀಡಿ ಅವರಿಗೆ ಕಾಯುವಂತೆ ಮಾಡಬೇಡಿ. ಅದು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತಿದೆ. ಆಗಲ್ಲ ಎಂದು ಹೇಳಿಬಿಡಿ’ ಎಂದು ಹೇಳಿ ಕೂರಿಸಿದರು.