ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ರೈತರು ಕೃಷಿಯಲ್ಲಿ ಮಿಶ್ರ ಬೆಳೆಯಾಗಿ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜೊತೆಗೆ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಹೋಬಳಿಯ ಗೂಳಿಹೊನ್ನೇನಹಳ್ಳಿ ಗ್ರಾಮದ ರೇಷ್ಮೆ ಕೃಷಿಕ ಕುಬೇರ ಅವರ ರೇಷ್ಮೆ ತೋಟದಲ್ಲಿ ತಾಂತ್ರಿಕ ಸೇವಾಕೇಂದ್ರ ಚನ್ನರಾಯಪಟ್ಟಣ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ತರಬೇತಿ ಸಂಸ್ಥೆ ರಾಮನಾಥಪುರ ( ಹಾಸನ) ಇವರ ಸಹಯೋಗದಲ್ಲಿ ರೇಷ್ಮೆ ಕೃಷಿ ಕ್ಷೇತ್ರೋತ್ಸವ ಹಾಗೂ ರೇಷ್ಮೆ ಬೆಳೆ ವಿಚಾರ ಸಂಕಿರಣ ಮತ್ತು ಸಹಾಯಧನದಲ್ಲಿ ರೇಷ್ಮೆ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.ಈ ವರ್ಷ ವಾರ್ಷಿಕವಾಗಿ ತಾಲೂಕಿಗೆ ಸುಮಾರು 25 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರೇಷ್ಮೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು. ಈಗ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.ಒಂದೇ ವೇದಿಕೆಯಲ್ಲಿ ವಿಜ್ಞಾನಿಗಳು ಅಧಿಕಾರಿಗಳು ಪ್ರಾಚಾರ್ಯರು ಎಲ್ಲರೂ ಸೇರಿ ರೇಷ್ಮೆ ಕೃಷಿಯಲ್ಲಿನ ತಾಂತ್ರಿಕ ಸಲಹೆಗಳನ್ನು ರೈತರಿಗೆ ನೀಡುತ್ತಿರುವುದರಿಂದ ಹೆಚ್ಚಿನ ಉಪಯೋಗವಾಗಿದೆ. ಭಾರತ ರೇಷ್ಮೆ ಉತ್ಪಾದಿಸುವಲ್ಲಿ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದ್ದು ನಮ್ಮ ದೇಶದಲ್ಲಿ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಗಮನಾರ್ಹ. ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಟ್ಟು 135 ಗ್ರಾಮಗಳಲ್ಲಿ 934 ರೇಷ್ಮೆ ಬೆಳೆಯುವ ರೈತರಿದ್ದು ಸುಮಾರು 684 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯನ್ನು ಬೆಳೆಯಲಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರು ಪಡೆದುಕೊಂಡು ರೇಷ್ಮೆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುವ ಮೂಲಕ ಹೆಚ್ಚು ಲಾಭ ಗಳಿಸುವಂತೆ ಸಲಹೆ ನೀಡಿದರು.ಬೆಂಗಳೂರು ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ ಡಾ. ನರೇಶ್ ಬಾಬು ಮಾತನಾಡಿ, ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ನನ್ನ ರೇಷ್ಮೆ ನನ್ನ ಹೆಮ್ಮೆ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ರೇಷ್ಮೆ ಬೆಳೆಯ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಮೈಲುಗಲ್ಲಾಗಿದೆ ಎಂದರುಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಾಳ್ಳೂರು ಶಿವಣ್ಣ ಮಾತನಾಡಿ, ರೈತರ ತೊಂದರೆಗಳ ಅನುಗುಣವಾಗಿ ಸಂಶೋಧನೆಗಳು ಜರುಗಬೇಕಾಗಿದೆ. ಈ ಬಗ್ಗೆ ಇಲಾಖೆ ಗಮನಹರಿಸುವಂತೆ ತಿಳಿಸಿದರು.
ಜಿಲ್ಲಾ ರೇಷ್ಮೆ ಉಪನಿರ್ದೇಶಕ ಎನ್. ಜೆ. ಗಿರೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರೇಷ್ಮೆ ಹುಳು ಸಾಗಾಣಿಗೆ ಸಹಾಯಧನದ ಚೆಕ್‌ಗಳನ್ನು ಮತ್ತು ಸಹಾಯಧನದಲ್ಲಿ ಮಂಜೂರಾದ ಯಂತ್ರೋಪಕರಣಗಳನ್ನು ಇದೇ ಸಂದರ್ಭದಲ್ಲಿ ರೈತರಿಗೆ ಶಾಸಕ ಸಿಎನ್ ಬಾಲಕೃಷ್ಣರವರು ವಿತರಣೆ ಮಾಡಿದರು.ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ತರಬೇತಿ ಸಂಸ್ಥೆಯ ವಿಜ್ಞಾನಿಗಳಾದ ಡಾ. ಕೆ ಬಿ ಚಂದ್ರಶೇಖರ್, ಡಾ. ಮಹಿಬಾ ಹೆಲನ್, ಡಾ. ಲೋಕೇಶ್, ಡಾ. ಲಿಖಿತ್ ಗೌಡ, ರೇಷ್ಮೆ ಪ್ರಾಚಾರ್ಯರಾದ ಶೈಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್, ಮಟ್ಟನವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಶಂಕ್ರಣ್ಣ, ಉಪಾಧ್ಯಕ್ಷ ಅಶೋಕ್, ಗ್ರಾಪಂ ಸದಸ್ಯರಾದ ರಂಗೇಗೌಡ, ಭವ್ಯ, ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಚ್ ಬಿ ದೇವೇಂದ್ರ ಕುಮಾರ್, ರೇಷ್ಮೆ ವಿತರಣಾಧಿಕಾರಿ ಡಾ. ಸುನಿಲ್ ಕುಮಾರ್ ಟಿ. ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್ ಸೇರಿದಂತೆ ರೇಷ್ಮೆ ಬೆಳೆಗಾರರು ಹಾಜರಿದ್ದರು.