ಇಂದಿನಿಂದ ‘ಮೈಸೂರು ಸಾಂಸ್ಕೃತಿಕ ಉತ್ಸವ’ ಆರಂಭ

| Published : Jan 26 2024, 01:50 AM IST

ಸಾರಾಂಶ

ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಇನ್ನಷ್ಟು ಮುಮ್ಮಡಿಗೊಳಿಸುವ ಸಂಗೀತ, ಹಾಸ್ಯ, ನೃತ್ಯ ಮತ್ತಷ್ಟು ಮನರಂಜನೆ ನೀಡುವ ಮೈಸೂರು ಫೆಸ್ಟ್- 2024 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾನಸ ಗಂಗೋತ್ರಿಯ ಆವರಣದಲ್ಲಿ ಭರಪೂರ ಸಿದ್ಧತೆಗಳು ಈಗಾಗಲೇ ನಡೆದಿದೆ. ಹಾಗೇ ಗಣರಾಜ್ಯೋತ್ಸವದ ಅಂಗವಾಗಿ ಜ.26 ರಂದು ಕೆ.ಎಸ್.ಟಿ.ಡಿ.ಸಿ ವತಿಯಿಂದ ಬೃಹತ್ ಸೈಕಲ್ ಥಾವನ್ನು ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಇನ್ನಷ್ಟು ಮುಮ್ಮಡಿಗೊಳಿಸುವ ಸಂಗೀತ, ಹಾಸ್ಯ, ನೃತ್ಯ ಮತ್ತಷ್ಟು ಮನರಂಜನೆ ನೀಡುವ ಮೈಸೂರು ಫೆಸ್ಟ್- 2024 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾನಸ ಗಂಗೋತ್ರಿಯ ಆವರಣದಲ್ಲಿ ಭರಪೂರ ಸಿದ್ಧತೆಗಳು ಈಗಾಗಲೇ ನಡೆದಿದೆ.

ಗಂಗೋತ್ರಿಯ ಬಯಲು ರಂಗಮಂದಿರ ಹಾಗೂ ಕ್ಲಾಕ್ ಟವರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಳಿಗೆಗಳ ನಿರ್ಮಾಣ, ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ಹಂತದ ತಯಾರಿ ಭರ್ಜರಿಯಾಗಿ ಸಾಗಿದೆ.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ಮೈಸೂರು ಫೆಸ್ಟ್ ಜ.26 ರಿಂದ 28 ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಜ.26ರ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಮೈಸೂರು ವಿವಿ ಕ್ಲಾಕ್ ಟವರ್ ಮುಂಭಾಗದ ರಸ್ತೆಯಲ್ಲಿ ಚಿತ್ರಸಂತೆ ಕಾರ್ಯಕ್ರಮ, ಜ.27ರ ಬೆಳಗ್ಗೆ 10 ರಿಂದ 11.30 ರವರೆಗೆ ಗಣಿತ ವಿಭಾಗ ಮುಂಭಾಗದ ಆವರಣದಲ್ಲಿ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ. ಅಂದು ಸಂಜೆ ಜಾರ್ಜಿಯನ್ ನಿಯೋಗದವರು ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಿದ್ದಾರೆ.

ಜ.26 ರಿಂದ 28 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯರವರೆಗೆ ಬಯಲು ರಂಗಮಂದಿರದ ಸುತ್ತಲಿನ ಆವರಣದಲ್ಲಿ ಪ್ಲೀ ಮಾರುಕಟ್ಟೆ, ಕ್ಲಾಕ್ ಟವರ್ ಪಕ್ಕದ ಆಟದ ಮೈದಾನದಲ್ಲಿ ಮೈಸೂರು ಫುಡ್ ಫೆಸ್ಟ್, ಕ್ಲಾಕ್ ಟವರ್ ಮುಂಭಾಗದ ರಸ್ತೆ ಮತ್ತು ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿವೆ.

ಇಂದು ಮೈಸೂರಿನಿಂದ ಕೆ.ಆರ್.ಎಸ್ ವರೆಗೆ ಸೈಕಲ್ ಜಾಥಾಗಣರಾಜ್ಯೋತ್ಸವದ ಅಂಗವಾಗಿ ಜ.26 ರಂದು ಕೆ.ಎಸ್.ಟಿ.ಡಿ.ಸಿ ವತಿಯಿಂದ ಬೃಹತ್ ಸೈಕಲ್ ಜಾಥಾವನ್ನು ಆಯೋಜಿಸಿದೆ.

ಕೆ.ಎಸ್.ಟಿ.ಡಿ.ಸಿ ಪ್ರಾಯೋಜತ್ವದ ಈ ಜಾಥಾಗೆ ಮೈಸೂರು ಅಥ್ಲೀಟ್ಸ್ ಕ್ಲಬ್, ಸೈಕ್ಲೋಪೀಡಿಯಾ, ಸೈಕ್ಲಿಂಗ್ ಮೈಸೂರು ತರಬೇತಿ ಅಕಾಡೆಮಿ, ರಾಯಲ್ ರೈಡರ್ಸ್ ಹಾಗೂ ಸಿಕೆಪಿ ಟೆಕ್ನೋ ಸ್ಪೋರ್ಟಸ್ ಕೈ ಜೋಡಿಸಿವೆ. 18 ಮಹಿಳೆಯರನ್ನು ಒಳಗೊಂಡ 75 ಸೈಕಲ್ ಸವಾರರ ತಂಡವು ಜೆ.ಎಲ್.ಬಿ ರಸ್ತೆಯಲ್ಲಿರುವ ಕೆ.ಎಸ್.ಟಿ.ಡಿ.ಸಿ ಕಚೇರಿಯಿಂದ ಕೆ.ಆರ್.ಎಸ್.ನಲ್ಲಿರುವ ಕೆ.ಎಸ್.ಟಿ.ಡಿ.ಸಿ ಕಚೇರಿವರೆಗೂ ಸುಮಾರು 20 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.

ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವದರ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಸಂದೇಶವನ್ನು ಸಾರಲಿದ್ದಾರೆ.

ಈ ಜಾಥಾಗೆ ಬೆಳಗ್ಗೆ 6ಕ್ಕೆ ಪತ್ರಕರ್ತ ರಾಮ್ ಚಾಲನೆ ನೀಡಲಿದ್ದು, ಕೆ.ಆರ್.ಎಸ್.ಗೆ ಬೆಳಗ್ಗೆ 7.30ಕ್ಕೆ ತಲುಪಲಿದ್ದು, 8ಕ್ಕೆ ರಾಷ್ಟ್ರದ್ವಜಾರೋಹಣ ನೆರವೇರಲಿದೆ. ಧ್ವಜಾರೋಹಣವನ್ನು ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಜಿ. ಜಗದೀಶ್ ನೆರವೇರಿಸಲಿದ್ದು, 2021ನೇ ಸಾಲಿನ ಮಿಸ್ ಗ್ಲಾಮರಸ್ ಕ್ವೀನ್ ಆಫ್ ಇಂಡಿಯಾ ಗೌರವಕ್ಕೆ ಭಾಜನರಾದ ತನಿಷ್ಕಾ ಮೂರ್ತಿ ಅತಿಥಿಯಾಗುವರು.

ಸಾರ್ವಜನಿಕ ಗ್ರಂಥಾಲಯಗಳ ಉಪ ನಿರ್ದೇಶಕ ಬಿ. ಮಂಜುನಾಥ್, ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ, ನಿವೃತ್ತ ಡಿವೈಎಸ್ಪಿ ಧನಂಜಯ, ದೀಪಕ್ ಪತಂಗೆ, ಅನಿಲ್, ಸಂತೋಷ್, ವಿನಯ್ ಸಿಂಗ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಲೋಕೇಶ್ ನರಸಿಂಹಾಚಾರ್ , ವೀಣಾ ಅಶೋಕ್, ನಾಗರಾಜ್, ಎಚ್.ಎಸ್. ದೀಪಕ್ ಅವರು ಈ ಸೈಕಲ್ ಜಾಥಾ ವ್ಯವಸ್ಥೆಗೆ ಸಹಕರಿಸಲಿದ್ದಾರೆ.