ಸಾರಾಂಶ
ಕರ್ನಾಟಕಕ್ಕೆ ಬಸವನಾಡು ಅಂತಾ ಹೆಸರಿಟ್ಟರೆ ಚೆನ್ನಾಗಿರುತ್ತದೆ ಎನ್ನುವ ವಿಷಯ ಚರ್ಚೆ ಪ್ರಾರಂಭವಾಗಿದ್ದು, ಬಸವನಾಡು ಎನ್ನುವುದು ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಹೇಳಿಕೆ
ಗದಗ: ಕರ್ನಾಟಕಕ್ಕೆ ಬಸವನಾಡು ಅಂತಾ ಹೆಸರಿಟ್ಟರೆ ಚೆನ್ನಾಗಿರುತ್ತದೆ ಎನ್ನುವ ವಿಷಯ ಚರ್ಚೆ ಪ್ರಾರಂಭವಾಗಿದ್ದು, ಬಸವನಾಡು ಎನ್ನುವುದು ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.ಅವರು ಶನಿವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವ ಜನ್ಮ ಭೂಮಿ ವಿಜಯಪುರಕ್ಕೆ ಬಸವೇಶ್ವರ ನಾಮಕರಣ ಪ್ರಕ್ರಿಯೆ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಬಸವತತ್ವ ಆಚರಣೆಯನ್ನು ಎಲ್ಲರೂ ತಪ್ಪದೇ ಮಾಡಿದಲ್ಲಿ ಕರ್ನಾಟಕ ಯಾವತ್ತೋ ಬಸವ ಕರ್ನಾಟಕವಾಗುತ್ತಿತ್ತು. ಮಠಾಧೀಶರು, ಜನರಿಗೆ ಬಸವ ತತ್ವ ಅರ್ಥ ಮಾಡಿಸಲು ಆಗಿಲ್ಲ ಎನ್ನುವುದು ಕೂಡಾ ಬೇಸರದ ಸಂಗತಿಯಾಗಿದೆ ಎಂದರು.
ಹಾಗಾಗಿಯೇ ಉತ್ತರ ಕರ್ನಾಟಕ ಗಡಿ ಬಿಟ್ಟು ಬಸವಣ್ಣ ಅವರನ್ನು ಬೇರೆಡೆ ತೆಗೆದುಕೊಂಡು ಹೋಗಲಿಕ್ಕೆ ಆಗಿಲ್ಲ. ಜಗತ್ತಿಗೆ ಮೊದಲ ಪಾರ್ಲಿಮೆಂಟ್ ಕೊಟ್ಟ ವ್ಯಕ್ತಿ ಬಸವಣ್ಣನವರು ಎಂದರು.ಎಲ್ಲ ಜಾತಿ, ಭಾಷೆಯವರಿಗೆ ಸಾಮಾಜಿಕ ಸಮಾನತೆ ಕೊಟ್ಟಿದ್ದು ಬಸವಣ್ಣವರು ಎನ್ನುವುದನ್ನು ಇತಿಹಾಸ ಸಾರಿ ಹೇಳುತ್ತದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಸಾಂಸ್ಕೃತಿಕ ನಾಯಕ ಅಂತಾ ಒಪ್ಪಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿವೇಕಾನಂದ ಅವರನ್ನು, ಪಂಜಾಬ್‌ನಲ್ಲಿ ಗುರುನಾನಕ ಅವರನ್ನು ಸಾಂಸ್ಕೃತಿಕ ಗುರು ಎಂದು ಒಪ್ಪಿಕೊಂಡಿದ್ದಾರೆ. ಬಸವಣ್ಣನವರಿಗೆ ಯಾವಾಗಲೋ ಕರ್ನಾಟಕದಲ್ಲಿ ಆ ಗೌರವ ಸಿಗಬೇಕಿತ್ತು, ಸಿಕ್ಕಿರಲಿಲ್ಲ ಎಂದರು.
ಈಗ ಚರ್ಚೆಯಾಗುತ್ತಿರುವುದು ಒಳ್ಳೆಯದು, ಇದು ವೈಯಕ್ತಿಕವಾಗಿ ನನಗೆ ಮತ್ತು ಬಸವ ತತ್ವ ಅನುಯಾಯಿಗಳಿಗೆ ಸಂತಸ ತಂದಿದೆ, ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇಂಗ್ಲೆಂಡ್‌ನಲ್ಲಿ ಬಸವ ಪ್ರತಿಮೆ ನಿರ್ಮಾಣವಾದ ನಂತರ ಜಾಗತಿಕ ಮಟ್ಟದಲ್ಲಿ ಅನುಭವ ಮಂಟಪ ಬಗ್ಗೆ ಚರ್ಚೆಯಾಯಿತು ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು. ನಾಡಿಗೆ ಬಸವ ನಾಡು ಅಂತಾ ಹೆಸರಿಟ್ಟರೆ ಬಸವ ವಿಚಾರ ಇನ್ನಷ್ಟು ಜಗತ್ತಿಗೆ ಪ್ರಚಾರವಾಗುತ್ತದೆ. ಬಸವಣ್ಣ ಎಲ್ಲರಿಗಾಗಿ, ಎಲ್ಲ ಭಾಷೆ, ಎಲ್ಲ ಧರ್ಮದವರಿಗೆ ಬದುಕಿದವರು. ಬಸವ ಕರುನಾಡು, ಬಸವ ಕರ್ನಾಟಕ, ಬಸವ ಕನ್ನಡ ನಾಡು ಅಂತಾ ಭಾವನಾತ್ಮಕವಾಗಿ ಚರ್ಚೆಯಾಗುತ್ತಿದೆ. ಇದು ಕೂಡಾ ಹೊಸ ಚರ್ಚೆ ಮತ್ತು ಚಿಂತನೆ ವಿಷಯವಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಪಕ್ಷ ಭೇದ ಮರೆತು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಮಾಡಲಿ ಎಂದು ಶ್ರೀಗಳು ಆಶಯ ವ್ಯಕ್ತ ಪಡಿಸಿದರು.