ಬಸವೇಶ್ವರರ ಪ್ರತಿಮೆ ಸ್ಥಾಪನೆ ಹಾಗೂ ವೃತ್ತ ನಾಮಕರಣದ ವಿಚಾರವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಜನರಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಬಸವಣ್ಣನವರ ಚಿಂತನೆಗಳನ್ನು ಕಡೆಗಣಿಸಿ ಕೇವಲ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಷ್ಟೇ ಅಲ್ಲ, ಅವರ ಮಹತ್ತರ ತತ್ವಸಿದ್ಧಾಂತಗಳಿಗೆ ಮಾಡುವ ಅವಮಾನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಂಜುಂಡಪ್ಪ ತೀವ್ರ ಕಿಡಿಕಾರಿದರು.ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಬಸವೇಶ್ವರರ ಪ್ರತಿಮೆ ಸ್ಥಾಪನೆ ಹಾಗೂ ವೃತ್ತ ನಾಮಕರಣದ ವಿಚಾರವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಜನರಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಬಸವಣ್ಣನವರ ಚಿಂತನೆಗಳನ್ನು ಕಡೆಗಣಿಸಿ ಕೇವಲ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಹೇಳಿದರು.ಪಿ.ಪಿ. ವೃತ್ತಕ್ಕೆ ಶ್ರೀ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡುವ ಬೇಡಿಕೆಗೆ ಆಗಿನ ಶಾಸಕ ಎ.ಎಸ್. ಬಸವರಾಜು ಸ್ಪಂದಿಸಿದ್ದರೆ, ನಂತರದ ಅವಧಿಯಲ್ಲಿ ಶಾಸಕ ಜಿ.ವಿ. ಸಿದ್ದಪ್ಪ ವಿರೋಧ ವ್ಯಕ್ತಪಡಿಸಿ ಅನಗತ್ಯ ಗೊಂದಲಕ್ಕೆ ಕಾರಣರಾದರು. ಈಗ ಇದೇ ವಿಷಯವನ್ನು ಎರಡೂ ಪಕ್ಷಗಳು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಜನರಿಗೆ ಸ್ಪಷ್ಟವಾಗಿದೆ ಎಂದು ಟೀಕಿಸಿದರು.ಶಾಸಕರು ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು ಸಮಾಜದ ಹಿತೈಷಿಗಳು, ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಮನಸ್ಸಿಗೆ ಬಂದಂತೆ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದು ಜನಪ್ರತಿನಿಧಿಗಳ ಘನತೆಗೆ ತಕ್ಕುದಲ್ಲ ಎಂದು ಎಚ್ಚರಿಸಿದರು. ಪಿ.ಪಿ. ವೃತ್ತಕ್ಕೆ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ನಗರಸಭೆ ಅದನ್ನು “ಪಾತ್ರೆ ಪುಟ್ಟಯ್ಯ ಶೆಟ್ಟಿ ವೃತ್ತ” ಎಂದು ಕರೆಯುತ್ತಿರುವುದು ಆಡಳಿತದ ನಿರ್ಲಕ್ಷ್ಯತೆಯ ಪರಮಾವಧಿಯಾಗಿದೆ. ಬಸವಣ್ಣನವರಂತಹ ಯುಗಪುರುಷರನ್ನು ಕಡೆಗಣಿಸಿ ಯಾವುದೇ ಮಾನದಂಡವಿಲ್ಲದ ವ್ಯಕ್ತಿಯ ಹೆಸರನ್ನು ಇಡುವುದು ಕಾನೂನು ಹಾಗೂ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.ಈ ವಿಚಾರವಾಗಿ ನ್ಯಾಯಾಲಯ ಸ್ಪಷ್ಟವಾಗಿ ಸಾರ್ವಜನಿಕರ ಅಭಿಪ್ರಾಯ ಪಡೆದು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಸೂಚಿಸಿದ್ದರೂ, ಅದನ್ನು ಲೆಕ್ಕಿಸದೇ ರಾಜಕೀಯ ಗಿಮಿಕ್ ಮುಂದುವರಿಯುತ್ತಿರುವುದು ದುರಂತಕರ ಬೆಳವಣಿಗೆಯಾಗಿದೆ ಎಂದು ಹೇಳಿದರು.ಬಸ್ ನಿಲ್ದಾಣಕ್ಕೆ ಬಸವೇಶ್ವರರ ಹೆಸರು ಇಡುವುದು ಸ್ವಾಗತಾರ್ಹವಾದರೂ, ಅವರ ಪ್ರತಿಮೆಯನ್ನು ಸೂಕ್ತ ಮತ್ತು ಗೌರವಾನ್ವಿತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ವೃತ್ತದಲ್ಲಿರುವ ಎಲ್‌ಇಡಿ ಫಲಕವನ್ನು ತೆರವುಗೊಳಿಸಿ ಅಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಿದರೆ ಜನರಲ್ಲಿ ಗೌರವಭಾವ ಹೆಚ್ಚಲಿದೆ. ಬಸವಣ್ಣನವರ ತತ್ವಗಳನ್ನು ರಾಜಕೀಯಕ್ಕೆ ಸೀಮಿತಗೊಳಿಸದೇ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.