ಕಾಡಾನೆ ದಾಳಿ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ ಸೂಚನೆ

| Published : Nov 18 2024, 12:00 AM IST

ಸಾರಾಂಶ

ಹಿರೆಕೋಲೆ ತಗರೆ ಇನ್ನಿತರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಭಾಗಗಳಲ್ಲಿ ಆನೆ ಹಾವಳಿಯಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬಿಕ್ಕೋಡು ಭಾಗಗಳಲ್ಲಿ ಕಟಾವಿಗೆ ಬಂದಂತ ಭತ್ತ, ಜೋಳ ಹಾಗೂ ತೆಂಗನ್ನು ಸಂಪೂರ್ಣ ಹಾನಿಮಾಡಿದ್ದು, ರೈತರಿಗೆ ಸರ್ಕಾರ ನೀಡುವ ಕನಿಷ್ಟ ಪರಿಹಾರ ಬೇಡ, ಆ ಬೆಳೆಗೆ ತಕ್ಕನಾದ ಪರಿಹಾರ ನೀಡುವಂತೆ ಸದನದಲ್ಲಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಡಾನೆ ದಾಳಿಗೆ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಚ್ ಕೆ ಸುರೇಶ್ ಸೂಚನೆ ನೀಡಿದರು.

ತಾಲೂಕಿನ ಬಿಕ್ಕೋಡು ಹೋಬಳಿಯ ಹಿರೆಕೋಲೆ ತಗರೆ ಇನ್ನಿತರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಭಾಗಗಳಲ್ಲಿ ಆನೆ ಹಾವಳಿಯಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬಿಕ್ಕೋಡು ಭಾಗಗಳಲ್ಲಿ ಕಟಾವಿಗೆ ಬಂದಂತ ಭತ್ತ, ಜೋಳ ಹಾಗೂ ತೆಂಗನ್ನು ಸಂಪೂರ್ಣ ಹಾನಿಮಾಡಿದ್ದು, ರೈತರಿಗೆ ಸರ್ಕಾರ ನೀಡುವ ಕನಿಷ್ಟ ಪರಿಹಾರ ಬೇಡ, ಆ ಬೆಳೆಗೆ ತಕ್ಕನಾದ ಪರಿಹಾರ ನೀಡುವಂತೆ ಸದನದಲ್ಲಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ನಮ್ಮ ಭಾಗಕ್ಕೆ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಂದ ನಮ್ಮ ಭಾಗಕ್ಕೆ ಆನೆಗಳನ್ನು ಓಡಿಸುತ್ತಿರುವುದರಿಂದ ಇಷ್ಟೊಂದು ತೊಂದರೆಯಾಗುತ್ತಿದೆ. ನಮ್ಮ ತಾಲೂಕಿನಲ್ಲಿ ಆನೆ ದಾಳಿಯಿಂದ ಸಂಪೂರ್ಣ ಬೆಳೆ ನಷ್ಟ ಹೊಂದಿರುವ ಸುಮಾರು ೮೫೨ ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳನ್ನು ವಿಲೇವಾರಿ ಮಾಡಿ ಅವರಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡುವಂತೆ ಸೂಚಿಸಿದ್ದೇನೆ ಎಂದರು.

ವಲಯ ಅರಣ್ಯ ಅಧಿಕಾರಿ ಯತೀಶ್ ಮಾತನಾಡಿ, ಈ ನಮ್ಮ ಭಾಗದಲ್ಲಿ ಆನೆಗಳು ಎರಡು ತಂಡಗಳಾಗಿದ್ದು, ಈಗಾಗಲೇ ಒಂದು ಮೂಡಿಗೆರೆ ಮೂಲಕ ಹೋಗಿದೆ. ಇನ್ನೊಂದು ತಂಡದಲ್ಲಿ ೧೭ ಆನೆಗಳಿದ್ದು, ಅವನ್ನೂ ಸಹ ಇನ್ನೆರಡು ದಿನಗಳಲ್ಲಿ ಹೊರಕಳಿಸಲಾಗುವುದು. ಈಗಾಗಲೇ ಶಾಸಕರ ಸೂಚನೆಯಂತೆ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.