ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಹಾರೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ತಹಸೀಲ್ದಾರ್‌ ಮತ್ತು ಪೊಲೀಸರು ಆರೋಪಿ ಜೊತೆಗೆ ಲಕ್ಷಾಂತರ ರು. ಬೆಲೆ ಬಾಳುವ 1.64 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ನಿವಾಸಿ ಪೀಟರ್ ಎಂಬುವರ ಪುತ್ರ ತಂಗರಾಜು (33) ಬಂಧಿತ ವ್ಯಕ್ತಿ. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಬಡಾವಣೆಯಲ್ಲಿ ಯುವಕನೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಶರತ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಸಬ್ ಇನ್ಸ್‌ಪೆಕ್ಟರ್ ಉಮೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ತಂಗರಾಜು ಎಂಬ ಯುವಕ ಚೀಲದಲ್ಲಿ 1 ಲಕ್ಷಕ್ಕೂ ಅಧಿಕ ಮೌಲ್ಯದ 1.64 ಕೆಜಿ ತೂಕದ ಅಕ್ರಮ ಗಾಂಜಾವನ್ನು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ. ಅಕ್ರಮ ಗಾಂಜಾದ ಜತೆಗೆ ತೂಕ ಮಾಡುವ ಯಂತ್ರ ಹಾಗೂ ಯುವಕನನ್ನು ಪೊಲೀಸರು ವಶಕ್ಕೆಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕ ತಂಗರಾಜು ಬೇರೆಡೆಯಿಂದ ಗಾಂಜಾವನ್ನು ತಂದು ಸ್ಥಳೀಯವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಹಿರೇಮರಳಿ ಸಮೀಪದ ಬಿಟ್ಟನಾಯಕನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ₹5 ಲಕ್ಷ ಮೌಲ್ಯದ 10.165 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಮೂವರು ಯುವಕರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಓರ್ವ ಆರೋಪಿ ತಪ್ಪಿಸಿಕೊಂಡಿದ್ದನು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಗಾಂಜಾ ಪ್ರಕರಣವನ್ನು ಪತ್ತೆ ಹಚ್ಚಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಗುಂಪಿನ ಹೆಡೆಮುರಿಕಟ್ಟುವ ಕೆಲಸ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ತೌಷಿಫ್, ಶಿವರಾಜು, ವರದರಾಜು, ಕುಮಾರ್, ಶೋಭಾ, ಗಿರೀಶ್ ಭಾಗವಹಿಸಿದ್ದರು. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

--

13ಕೆಎಂಎನ್‌ಡಿ-6 ಗಾಂಜಾ ಮಾರಾಟ ಸ್ಥಳದ ಮೇಲೆ ದಾಳಿ ನಡೆಸಿದ ತಹಸೀಲ್ದಾರ್‌ ಮತ್ತು ಪೊಲೀಸರು ಆರೋಪಿಯೊಂದಿಗೆ 1.64 ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡಿರುವುದು.