ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ವತಿಯಿಂದ ಫೆ.15ರಂದು ತಾಲೂಕಿನ ಅಬ್ಬಲಗೆರೆಯ ಈಶ್ವರ ವನದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಜಾಗೃತಿ ಸೇರಿದಂತೆ ‘ಪರಿಸರ ಶಿವರಾತ್ರಿ’ ಆಚರಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಯಿಂದ ರುದ್ರಾಭಿಷೇಕ ನಡೆಯಲಿದ್ದು, ಭಕ್ತಾದಿಗಳು ತಮ್ಮ ಸ್ವಹಸ್ತಗಳಿಂದ ಜಲಾಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರವನ್ನು ಡಾ.ರತ್ನಾಕರ್ ಉದ್ಘಾಟಿಸಲಿದ್ದಾರೆ. 11 ಗಂಟೆಯಿಂದ 7 ರಿಂದ 10 ನೇ ತರಗತಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಹವ್ಯಾಸಿ ಛಾಯಾಗ್ರಾಹಕರೂ ಆದ ಡಾ. ರತ್ನಾಕರ್ ಅವರು ಸೆರೆ ಹಿಡಿದ ಜೀವ ವೈವಿಧ್ಯಗಳ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಜೆ ೪ಕ್ಕೆ ಸಾರ್ವಜನಿಕರಿಗಾಗಿ ಪರಿಸರ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ವಿನಯ್ ಶಿವಮೊಗ್ಗ ಇವರು ನಡೆಸಿಕೊಡಲಿದ್ದಾರೆ. ಇದರಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

ಸಂಜೆ 5.30ಕ್ಕೆ ಕಲಾರ್ಪಣಂ ಸ್ಕೂಲ್ ಆಫ್ ಆರ್ಟ್ಸ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಪರಿಸರ ಕುರಿತ ಕಿರುಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಿರುಚಿತ್ರ ನಿರ್ದೇಶಕ ಪ್ರಶಾಂತ್ ಸಾಗರ್ ಉಪಸ್ಥಿತರಿರಲಿದ್ದಾರೆ.


ಇದೇ ಸಂದರ್ಭದಲ್ಲಿ ಈ ಬಾರಿಯ ಈಶ್ವರವನ ಪರಿಸರ ಪ್ರಶಸ್ತಿಗೆ ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ ಆಯ್ಕೆಯಾಗಿದ್ದಾರೆ. ಈಶ್ವರವನ ಸಾಮಾಜಿಕ ಪ್ರಶಸ್ತಿಗೆ ಸಿ.ಆರ್.ಶಿವಕುಮಾರ್ ಭಾಜನರಾಗಿದ್ದು, ಇವರು ವಿಶೇಷ ಚೇತನರಿಗಾಗಿ ಶ್ರಮಿಸುತ್ತಿರುವ ವಿಶೇಷ ಚೇತನರಾಗಿದ್ದಾರೆ. ರಾತ್ರಿ ೮ರಿಂದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ನೇತೃತ್ವದ ಗುರುಗುಹ ಸಂಗೀತ ಮಹಾವಿದ್ಯಾಲಯ ತಂಡದಿಂದ ಶ್ರೀ ಶಿವನಾಮ ಸ್ಮರಣೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಸಾರ್ವಜನಿಕರಿಗೆ ಶಿವಾಷ್ಟೋತ್ತರ ಪಠಿಸುತ್ತಾ ಪ್ರದಕ್ಷಿಣೆ ಮೂಲಕ ಶಿವನಿಗೆ ಅಭಿಷೇಕ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಡಾ. ಶಾಂತಲಾ ಕೌಶಿಕ್ ತಂಡದವರಿಂದ ಪ್ಲಾಸ್ಟಿಕ್ ಮಹಾಮಾರಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಬೃಹತ್ ಪರದೆಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಪಶ್ಚಿಮ ಘಟ್ಟಗಳ ಮೇಲಾಗುತ್ತಿರುವ ಅನಾಹುತಗಳ ಬಗ್ಗೆ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ, ರೋಟರಿ ಬ್ಲಡ್ ಬ್ಯಾಂಕ್, ಪರೋಪಕಾರಂ ತಂಡ, ನವ್ಯಶ್ರೀ ಯೋಗ ಕೇಂದ್ರ, ನವ್ಯಶ್ರೀ ಅನ್ನದಾನಂ ತಂಡದ ಸಹಕಾರದೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ ೯ರಿಂದ ನಿರಂತರ ಪ್ರಸಾದ ವ್ಯವಸ್ಥೆ ಇತ್ಯಾದಿಗಳನ್ನು ಆಯೋಜಿಸಲಾಗಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.

ಗೋಷ್ಠಿಯಲ್ಲಿ ನಾಗರಾಜ್ ಶೆಟ್ಟರ್, ಡಾ. ಶಾಂತಲಾ ಕೌಶಿಕ್, ಶಿವಮೊಗ್ಗ ವಿನಯ್, ಪರೋಪಕಾರಂ ಶ್ರೀಧರ್, ಸುಬ್ರಹ್ಮಣ್ಯ, ಮನೋಹರ್ ವಿಜಯಪುರ, ಪಿ. ಪ್ರದೀಪ್, ಸಂತೋಷ್ ಎಲಿಗಾರ್ ಉಪಸ್ಥಿತರಿದ್ದರು.