ರೈತರ ಹೊಲಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ

| Published : Feb 20 2024, 01:48 AM IST

ಸಾರಾಂಶ

ಮಳೆಯನ್ನೆ ನಂಬಿರುವ ರೈತರಿಗೆ ಕುಡಿಯುವ ನೀರು, ಬೆಳೆಗಳಿಗೆ ಹಾಗೂ ದನ - ಕರುಗಳಿಗೆ ಶಾಶ್ವತ ನೀರಿನ ಯೋಜನೆ ಅವಶ್ಯಕತೆ ಇದೆ. ಇದಕ್ಕಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ನಿರ್ಮಿಸುತ್ತಿರುವ ಕಿತ್ವಾಡ ಆಣೆಕಟ್ಟಿನಿಂದ ನೀರನ್ನು ಹಿರಣ್ಯಕೇಶಿ ನದಿಗೆ ಹರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಕರ್ನಾಟಕ ರಾಜ್ಯ ಪಾಲಿನ ಹಣವನ್ನು ಮಹಾರಾಷ್ಟ್ರಕ್ಕೆ ಕೊಡಲು ಶೀಘ್ರವೇ ನೀರಾವರಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಂಕೇಶ್ವರ, ಹುಕ್ಕೇರಿ ಹಾಗೂ ಯಮಕನಮರಡಿ ಹೋಬಳಿಗಳ ಗ್ರಾಮೀಣ ಭಾಗದ ರೈತರ ಹೊಲಗಳಿಗೆ ಶಾಶ್ವತ ನೀರಾವರಿ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಭರವಸೆ ನೀಡಿದರು.

ಬಡಕುಂದ್ರಿ ವೃತ್ತದಲ್ಲಿ ರೈತ ಹಿತರಕ್ಷಣಾ ವೇದಿಕೆ ವತಿಯಿಂದ ಹಿರಣ್ಯಕೇಶಿ ನದಿಗೆ ಕಟ್ಟಲಾಗಿರುವ 5 ಬ್ಯಾರೇಜುಗಳಿಗೆ ನೀರು ತುಂಬಿಸಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅವರು ರೈತರ ಕಷ್ಟಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಸಂಸದರು, ಸಮಯಕ್ಕೆ ಸರಿಯಾಗಿ ಸುರಿಯದ ಮಳೆಯಿಂದ ರೈತರ ಬದುಕು ಕಷ್ಟಕರವಾಗಿದೆ. ಒಂದು ವರ್ಷ ಉತ್ತಮವಾಗಿ ಮಳೆಯಾಗುತ್ತದೆ, ಮತ್ತೊಂದು ವರ್ಷ ಕಡಿಮೆ ಮಳೆಯಾಗುತ್ತದೆ. ಆದ್ದರಿಂದ ಈ ಭಾಗದ ರೈತರಿಗೆ, ಜನ-ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗುತ್ತದೆ ಎಂದರು.

ಮಳೆಯನ್ನೇ ನಂಬಿರುವ ರೈತರಿಗೆ ಕುಡಿಯುವ ನೀರು, ಬೆಳೆಗಳಿಗೆ ಹಾಗೂ ದನ - ಕರುಗಳಿಗೆ ಶಾಶ್ವತ ನೀರಿನ ಯೋಜನೆ ಅವಶ್ಯಕತೆ ಇದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ನಿರ್ಮಿಸುತ್ತಿರುವ ಕಿತ್ವಾಡ ಆಣೆಕಟ್ಟಿನಿಂದ ನೀರನ್ನು ಹಿರಣ್ಯಕೇಶಿ ನದಿಗೆ ಹರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಕರ್ನಾಟಕ ರಾಜ್ಯ ಪಾಲಿನ ಹಣವನ್ನು ಮಹಾರಾಷ್ಟ್ರಕ್ಕೆ ಕೊಡಲು ಶೀಘ್ರವೇ ನೀರಾವರಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದರು.

ರೈತ ಹೋರಾಟ ಸಮಿತಿಯ ಸಂಚಾಲಕ ರಾಮಚಂದ್ರ ಜೋಶಿ ಮಾತನಾಡಿ, ಹಿಡಕಲ್ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ 18 ಹಳ್ಳಿಗಳ ಸಾವಿರಾರು ಕುಟುಂಬಗಳು ತಮ್ಮ ಹೊಲ, ಮನೆಗಳನ್ನು ತ್ಯಾಗ ಮಾಡಿ ಜಾಗ ಖಾಲಿ ಮಾಡಿದರು. ಅವರ ಜಾಗೆಯಲ್ಲಿ ನಿರ್ಮಾಣವಾಗಿರುವ ಹಿಡಕಲ್ ಜಲಾಶಯದಿಂದ ಹುಕ್ಕೇರಿ ತಾಲೂಕಿನಲ್ಲಿ 10 % ಸಹಿತ ನೀರಾವರಿ ಸೌಲಭ್ಯ ಆಗಲಿಲ್ಲ. ಈ ಹಿಡಕಲ್ ಜಲಾಶಯದಿಂದ ಬೇರೆ ತಾಲೂಕುಗಳಿಗೆ, ಬೇರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವಾಯಿತು. ಪ್ರತಿ ವರ್ಷವೂ ನಾವು ಸರ್ಕಾರದ ಮುಂದೆ ಗೋಗೆರೆಯುವ ಪರಿಸ್ಥಿತಿ ಬಂದಿದೆ ಎಂದು ಎಳೆ-ಎಳೆಯಾಗಿ ಸಮಸ್ಯೆಯನ್ನು ಬಿಡಿಸಿಟ್ಟರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಹಿಡಕಲ್ ಜಲಾಶಯದಿಂದ ಕುರಣಿ ಮತ್ತು ಕೊಚರಿ ಯಾತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸಿ ಕೊಚರಿ, ಬಡಕುಂದ್ರಿ, ಯರಗಟ್ಟಿ, ಯರನಾಳ ಹಾಗೂ ಸುಲ್ತಾನಪೂರ ಬ್ಯಾರೇಜುಗಳನ್ನು ತಕ್ಷಣವೇ ತುಂಬಿಸಬೇಕೆಂದು ಆಗ್ರಹ ಮಾಡಿದರು.

ಈ ವೇಳೆ ಪರಗೌಡ ಪಾಟೀಲ, ಶಿವನಾಯಿಕ ನಾಯಿಕ,ವಿ.ಬಿ.ಇನಾಮದಾರ ಮುಂತಾದವರು ಇದ್ದರು.

ಕೋಟ್...ಮಳೆಯನ್ನೆ ನಂಬಿರುವ ರೈತರಿಗೆ ಕುಡಿಯುವ ನೀರು, ಬೆಳೆಗಳಿಗೆ ಹಾಗೂ ದನ - ಕರುಗಳಿಗೆ ಶಾಶ್ವತ ನೀರಿನ ಯೋಜನೆ ಅವಶ್ಯಕತೆ ಇದೆ. ಇದಕ್ಕಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ನಿರ್ಮಿಸುತ್ತಿರುವ ಕಿತ್ವಾಡ ಆಣೆಕಟ್ಟಿನಿಂದ ನೀರನ್ನು ಹಿರಣ್ಯಕೇಶಿ ನದಿಗೆ ಹರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಕರ್ನಾಟಕ ರಾಜ್ಯ ಪಾಲಿನ ಹಣವನ್ನು ಮಹಾರಾಷ್ಟ್ರಕ್ಕೆ ಕೊಡಲು ಶೀಘ್ರವೇ ನೀರಾವರಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಅಣ್ಣಾಸಾಹೇಬ ಜೊಲ್ಲೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ