ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಇಳಿಕೆ ಕಾಣದ ಬೆಳ್ಳುಳ್ಳಿಯ ಬೆಲೆ

| Published : Feb 20 2024, 01:48 AM IST / Updated: Feb 20 2024, 01:12 PM IST

ಸಾರಾಂಶ

ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏಕಾಏಕಿ ಕುಸಿದಿದೆ. ಎರಡು ವಾರಗಳ ಹಿಂದೆ ಕೇಜಿಗೆ ₹350- ₹400 ಇದ್ದ ಸಗಟು ದರ ಸೋಮವಾರ ₹120-₹220ಕ್ಕೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಪ್ರತಿ ಕೇಜಿಗೆ ₹280-320 ರವರೆಗೆ ಬೆಲೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏಕಾಏಕಿ ಕುಸಿದಿದೆ. ಎರಡು ವಾರಗಳ ಹಿಂದೆ ಕೇಜಿಗೆ ₹350- ₹400 ಇದ್ದ ಸಗಟು ದರ ಸೋಮವಾರ ₹120-₹220ಕ್ಕೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಪ್ರತಿ ಕೇಜಿಗೆ ₹280-320 ರವರೆಗೆ ಬೆಲೆಯಿದೆ.

ಮಧ್ಯಪ್ರದೇಶದಲ್ಲಿ ಕೊಯ್ಲು ನಡೆಯುತ್ತಿರುವುದರಿಂದ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಹೆಚ್ಚಿನ ಬರುತ್ತಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.

 ಸ್ಥಳೀಯ ಅಂಗಡಿಗಳಲ್ಲಿ ಹಳೆ ಬೆಲೆಯ ಬೆಳ್ಳುಳ್ಳಿ ದಾಸ್ತಾನು ಇರುವುದರಿಂದ ಒಂದೆರಡು ದಿನ ₹250ವರೆಗೆ ಬೆಲೆ ಇರಬಹುದು. ನಂತರದ ದಿನಗಳಲ್ಲಿ ಗ್ರಾಹಕರ ಕೈಗೆಟುವ ದರಕ್ಕೆ ಸಿಗಲಿದೆ ಎಂದು ವರ್ತಕರು ಹೇಳಿದರು.

ಎಪಿಎಂಸಿಗೆ ಕಳೆದ ಶನಿವಾರ ಸುಮಾರು 4800 ಚೀಲದಷ್ಟು (ಪ್ರತಿ ಚೀಲ 50 ಕೇಜಿ) ಬೆಳ್ಳುಳ್ಳಿ ಬಂದಿತ್ತು. ಸೋಮವಾರ 6500ಕ್ಕೂ ಹೆಚ್ಚಿನ ಚೀಲ ಬಂದಿದೆ. ಇದರಿಂದ ಸಹಜವಾಗಿ ಬೆಲೆ ಇಳಿಕೆಯಾಗಿದೆ.

ಬೆಂಗಳೂರು ಬೆಳ್ಳುಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಿಪಿನ್‌ ವೋರಾ ಮಾತನಾಡಿ, ಏಕಾಏಕಿ ಬೆಲೆ ಕಡಿಮೆಯಾಗಿದ್ದು, ಮುಂದಿನ ವಾರಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ. 

ಇಷ್ಟು ಬೇಗ ಈ ಪ್ರಮಾಣದಲ್ಲಿ ಬೆಲೆ ಇಳಿಯುವ ನಿರೀಕ್ಷೆ ಇರಲಿಲ್ಲ. ‘ಎ’ ದರ್ಜೆಯ ಬೆಳ್ಳುಳ್ಳಿ ಸಗಟು ದರವೇ ₹400 ತಲುಪಿತ್ತು. ಸೋಮವಾರ ₹250ಗೆ ಇಳಿದಿದೆ. ಕಡಿಮೆ ಗ್ರೇಡ್‌ನ ಬೆಳ್ಳುಳ್ಳಿ ₹120-₹100ಕ್ಕೆ ಇಳಿದಿದೆ ಎಂದು ಹೇಳಿದರು.

ಸಗಟು ವರ್ತಕ ಎಸ್‌.ಆನಂದನ್‌ ಮಾತನಾಡಿ, ಮಂಡಿಯಲ್ಲಿ ದರ ಕಡಿಮೆಯಾಗಿದ್ದು, ಒಂದೆರಡು ದಿನದಲ್ಲಿ ಗ್ರಾಹಕರಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕಡಿಮೆಗೆ ಸಿಗಲಿದೆ. 

ಒಂದೆರಡು ತಿಂಗಳಿಂದ ಜನ ಬೆಳ್ಳುಳ್ಳಿಯ ಬಳಕೆಯನ್ನೇ ಕಡಿಮೆ ಮಾಡಿಬಿಟ್ಟಿದ್ದರು. ಈಗ ಪುನಃ ಬಳಸಲು ಆರಂಭವಾಗಲಿದೆ ಎಂದು ಹೇಳಿದರು.