, ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನೀಡುವವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು ಈಗಾಗಲೇ 2016 ರಲ್ಲಿ ಈ ಕಾರ್ಯಕ್ರಮ ನಡೆದಿದ್ದು ಇಡೀ ಅರಕಲಗೂಡು ತಾಲೂಕು ಪಟ್ಟಣದ ಜನತೆಯ ಮನಸೂರೆಗೊಂಡಿರುತ್ತದೆ.ಇದು ಎರಡನೇ ಬಾರಿ ನಡೆಯುತ್ತಿರುವ ಅದ್ಭುತ ಕಾರ್ಯಕ್ರಮವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಇಲ್ಲಿನ ಪ್ರತಿಭಾನ್ವಿತ 350 ವಿದ್ಯಾರ್ಥಿ ಕಲಾವಿದರಿಂದ ಅರಕಲಗೂಡು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಡಿಸೆಂಬರ್ 20ರಂದು ಸಂಜೆ 5.45ಕ್ಕೆ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ.ತಾಲೂಕಿನ ಶಾಸಕರ ಸಹಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ವಿವಿಧ ವೃಂದ ಸಂಘಗಳ, ಸರ್ಕಾರಿ ನೌಕರರ ಸಂಘ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ ಇವರುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೇದಿಕೆ ಸಂಯೋಜಕ ಅರುಣ್ ಕುಮಾರ್ ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನೀಡುವವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು ಈಗಾಗಲೇ 2016 ರಲ್ಲಿ ಈ ಕಾರ್ಯಕ್ರಮ ನಡೆದಿದ್ದು ಇಡೀ ಅರಕಲಗೂಡು ತಾಲೂಕು ಪಟ್ಟಣದ ಜನತೆಯ ಮನಸೂರೆಗೊಂಡಿರುತ್ತದೆ.ಇದು ಎರಡನೇ ಬಾರಿ ನಡೆಯುತ್ತಿರುವ ಅದ್ಭುತ ಕಾರ್ಯಕ್ರಮವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕ್ರೀಡೆ, ಕಲೆ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ತನ್ನದೇ ಆದ ಛಾಪನ್ನು ಮೂಡಿಸಿದ್ದು ಆಳ್ವಾಸ್ ನುಡಿಸಿರಿ ವಿರಾಸತ್ ದೇಶದ ಗಮನವನ್ನು ಸೆಳೆಯುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಶಿಕ್ಷಣ ತಜ್ಞರೂ, ಸ್ವತಃ ಕಲಾವಿದರೂ ಆಗಿರುವ ಡಾ. ಎಂ ಮೋಹನ ಆಳ್ವರ ಗಮನಾರ್ಹ ಕೊಡುಗೆ ಇದೆ. ಕಳೆದ 30 ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ, ವಿವಿಧ ಭಾಗಗಳಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕಗಳನ್ನು ಸ್ಥಾಪಿಸಿ ದೇಶದ ಬೇರೆ ಬೇರೆ ಭಾಗಗಳಲ್ಲಿನ ಅಳಿವಿನಂಚಿಗೆ ಸರಿಯುತ್ತಿದ್ದ ಕಲೆಗಳನ್ನು ಆರಿಸಿಕೊಂಡು ಅವುಗಳಿಗೆ ಮರು ಸ್ಪರ್ಶವನ್ನು ನೀಡಿ ಉಳಿಸಿ ಬೆಳೆಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಸಮಾಜದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಒಡೆದುಹೋಗುತ್ತಿರುವ ಮನಸ್ಸುಗಳನ್ನು ಒಂದುಗೂಡಿಸುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.ಈ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ- ಅಷ್ಟ ಲಕ್ಷ್ಮೀ , ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ - ಶಂಕರಾರ್ಧ ಶರೀರಿಣಿ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಗುಜರಾತಿನ ಗಾರ್ಭ ಮತ್ತು ದಾಂಡಿಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ- ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ಯಕ್ಷಗಾನ- ಶ್ರೀರಾಮ ಪಟ್ಟಾಭಿಷೇಕ, ಬೊಂಬೆ ವಿನೋದಾವಳಿ ಎಂಬ ಶಾಸ್ತ್ರೀಯ, ಜಾನಪದ ಮತ್ತು ಸೃಜನಾತ್ಮಕ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕ ಮಹೇಶ್ ಎಚ್.ಹೊಂಬಾಳೆ,ಮುಖಂಡರಾದ ಬಾಣದಹಳ್ಳಿ ಗಣೇಶ್,ರಘು,ರವಿ ವಕಾರೆ,ಅಶೋಕ,ಸರಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು ಇತರರು ಉಪಸ್ಥಿತರಿದ್ದರು.