ಸಂಸ್ಕರಿಸಿದ ಆಹಾರ ಬೆಳೆಯುವ ಮಕ್ಕಳಿಗೆ ಮಾರಕ

| Published : Oct 09 2025, 02:00 AM IST

ಸಾರಾಂಶ

ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ತಂದೆತಾಯಿ ಅರಿಯಬೇಕಿದೆ. ತರಕಾರಿ, ಸೊಪ್ಪು, ಕಾಳು, ಹಣ್ಣು, ಹಾಲು, ಮೊಸರು, ತುಪ್ಪ ಸೇವಿಸಬೇಕು ಹಾಗೂ ಕಡಿಮೆ ಪೌಷ್ಠಿಕಾಂಶವುಳ್ಳ ತಿನಿಸುಗಳು ಆರೋಗ್ಯಕ್ಕೆ ಮಾರಕ ಎಂದು ತಿಳಿಸಬೇಕಿದೆ. ಇದರ ಜೊತೆಗೆ ದೈಹಿಕ ಕಸರತ್ತು ಮಾಡದೇ ಇರುವುದರಿಂದಲೂ ಸಮಸ್ಯೆ ಉಂಟಾಗಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಕಡಿತ ಗೊಳಿಸಿ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ಪ್ರೇರೆಪಿಸುವುದು ಬಹು ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ತಂದೆತಾಯಿ ಅರಿಯಬೇಕಿದೆ.

ತಮ್ಮ ಒತ್ತಡದ ಬದುಕಿನಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಕೆಲವರು ತೋರುತ್ತಿರುವ ನಿರ್ಲಕ್ಷ್ಯವು ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹೃದಯ ಕಾಯಿಲೆಗಳು, ಬೊಜ್ಜು ಸಮಸ್ಯೆ, ದೃಷ್ಟಿ ದೋಷ, ಸಕ್ಕರೆ ಕಾಯಿಲೆ ಹಾಗೂ ಇತರ ದೈನಂದಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಿದೆ. ಚಿಪ್ಸ್ ಹಾಗೂ ಇತರೆ ಸಂಸ್ಕರಿಸಿದ ತಿಂಡಿಗಳಲ್ಲಿರುವ ಅಧಿಕ ಪ್ರಮಾಣದ ಉಪ್ಪು ಹಾಗೂ ಟ್ಯಾನ್ ಕೊಬ್ಬಿನಾಂಶ ಬೆಳವಣಿಗೆ ಹಂತದ ಶಾಲಾ ಮಕ್ಕಳಿಗೆ ಮಾರಕವಾಗಿದೆ. ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಆಕರ್ಷಕ ಪ್ಯಾಕೇಟ್‌ಗಳು ಜತೆಗೆ ವರ್ಣರಂಜಿತ ಶೀರ್ಷಿಕೆ ಹಾಗೂ ತಿನಿಸುಗಳಲ್ಲಿ ಬೆರೆಸಿರುವ ರಾಸಾಯನಿಕಗಳು ಮಕ್ಕಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುವ ಜತೆಗೆ ಮಕ್ಕಳ ಆರೋಗ್ಯ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಐದು ರು. ನೀಡುವ ತಿನಿಸಿಗೆ ಉತ್ಪಾದಕರ ಖರ್ಚು ಹಾಗೂ ಲಾಭ, ವಿತರಕ, ಮಾರಾಟಗಾರ ಸಾರಿಗೆ ಖರ್ಚು ಮತ್ತು ಲಾಭ, ಕಾರ್ಮಿಕರ ಕೂಲಿ ಎಲ್ಲವನ್ನು ಚಿಂತಿಸಿದಾಗ ಪ್ಯಾಕೇಟಿನಲ್ಲಿ ಇರುವ ಉತ್ಪನ್ನದ ಗುಣಮಟ್ಟ ಗಾಬರಿ ಮೂಡಿಸುತ್ತದೆ. ಈ ತಿನಿಸುಗಳ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ತುರ್ತುಕ್ರಮ ಅಗತ್ಯವಿದೆ.

ತರಕಾರಿ, ಸೊಪ್ಪು, ಕಾಳು, ಹಣ್ಣು, ಹಾಲು, ಮೊಸರು, ತುಪ್ಪ ಸೇವಿಸಬೇಕು ಹಾಗೂ ಕಡಿಮೆ ಪೌಷ್ಠಿಕಾಂಶವುಳ್ಳ ತಿನಿಸುಗಳು ಆರೋಗ್ಯಕ್ಕೆ ಮಾರಕ ಎಂದು ತಿಳಿಸಬೇಕಿದೆ. ಇದರ ಜೊತೆಗೆ ದೈಹಿಕ ಕಸರತ್ತು ಮಾಡದೇ ಇರುವುದರಿಂದಲೂ ಸಮಸ್ಯೆ ಉಂಟಾಗಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಕಡಿತ ಗೊಳಿಸಿ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ಪ್ರೇರೆಪಿಸುವುದು ಬಹು ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ಕುಟುಂಬ ಪದ್ಧತಿ ಜತೆಗೆ ಹಣದ ಹಿಂದೆ ಓಡುವ ಮನಸ್ಥಿತಿಯೂ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆರೋಗ್ಯಕರ ಆಹಾರ ಪದ್ಧತಿ ಹಾಗೂ ಶಿಸ್ತಿನ ಜೀವನ ಶೈಲಿಯನ್ನು ಸಣ್ಣ ವಯಸ್ಸಿನಲ್ಲಿಯೇ ರೂಢಿಸಿಕೊಳ್ಳುವ ಅವಶ್ಯಕತೆ ಬಗ್ಗೆ ಪೋಷಕರು ಅರಿತು ಪಾಲನೆ ಮಾಡುವ ಜತೆಗೆ ಮಕ್ಕಳನ್ನು ಪಾಲನೆ ಮಾಡಲು ಪ್ರೇರೇಪಿಸುವ ಜವಾಬ್ದಾರಿ ಪೋಷಕರ ಮೇಲಿದೆ.