ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರ್ಕಾರ ಎ.ಜೆ. ಸದಾಶಿವ ಆಯೋಗದ ವರದಿಯನ್ನು ನಾಗಮೋಹನ್ ದಾಸ್ ಆಯೋಗಕ್ಕೆ ಕೂಡಲೇ ಹಸ್ತಾಂತರಿಸಬೇಕು ಮತ್ತು ದತ್ತಾಂಶದ ವರದಿಯನ್ನು ಕೂಡಲೇ ಪಡೆದು ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾದಿಗ ದಂಡೋರ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು. ಇದೇ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ದೇಶವೇ ತಿರುಗಿ ನೋಡುವಂತೆ ರಾಷ್ಟ್ರದಲ್ಲೇ ಸಂಚಲ ಉಂಟುಮಾಡಿರುವ ಆದಿಜಾಂಭವ ಸಮಾಜದ ಕುಲತಿಲಕ ಮಂದಾಕೃಷ್ಣ ಮಾದಿಗ ಅವರಿಗೆ ಈ ಹೋರಾಟವನ್ನು ಅರ್ಪಣೆ ಮಾಡುತ್ತೇವೆ. ನೌಕರರೇ ಒಳಮೀಸಲಾತಿಯ ಮೊಟ್ಟಮೊದಲ ಫಲಾನುಭವಿಗಳು. ಆದ್ದರಿಂದ ಈ ಚಳವಳಿಯನ್ನು ಮುನ್ನೆಡೆಸುವ ಜವಾಬ್ದಾರಿ ವಿದ್ಯಾರ್ಥಿಗಳು ಮತ್ತು ನೌಕರರ ಮೇಲಿದೆ. ಈ ಸಂಬಂಧ ಈಗಾಗಲೇ ಸರ್ಕಾರದ ಬಳಿ ಎಲ್.ಜಿ. ಹಾವನೂರು ಆಯೋಗದ ವರದಿ ಹಾಗೂ ಎ.ಜೆ. ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜು ಆಯೋಗದ ವರದಿಗಳು ಸರ್ಕಾರದ ಬಳಿ ಇದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಮತ್ತು ಕಾಂತರಾಜು ಆಯೋಗದ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗಕ್ಕೆ ಹಸ್ತಾಂತರಿಸಿ ದತ್ತಾಂಶವನ್ನು ಕಲೆ ಹಾಕಲು ಸಹಕಾರ ನೀಡಬೇಕೆಂದು ನಾಗಮೋಹನ್ ದಾಸ್ ಆಯೋಗದವರೂ ಕೂಡ ಸರ್ಕಾರಕ್ಕೆ ಪತ್ರ ಬರೆದು ಸದಾಶಿವ ಆಯೋಗದ ವರದಿಯನ್ನು ಪಡೆದುಕೊಂಡು ದತ್ತಾಂಶವನ್ನು ಕಲೆ ಹಾಕಬೇಕೆಂದು ಮತ್ತು ಆಯೋಗದ ವರದಿಯನ್ನು ಮಾರ್ಚ್‌ನಲ್ಲಿ ಪಡೆದ ಕೂಡಲೇ ಸಂಪುಟ ಸಭೆ ಕರೆದು ಜಾರಿ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದರು. ರಾಜ್ಯ ಕಾರ್ಯದರ್ಶಿ ಇಂದ್ರೇಶ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ೧೭ ಜಿಲ್ಲೆಗಳಲ್ಲಿ ಗೊಂದಲ ಉಂಟಾಗಿರುವ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ಮೈಸೂರು ವಿಭಾಗದ ೯ ಜಿಲ್ಲೆಗಳಲ್ಲಿ ಆದಿ ಕರ್ನಾಟಕ ಮತ್ತು ಆದಿದ್ರಾವಿಡ ಸಮಸ್ಯೆಯ ಗೊಂದಲವಿದ್ದು ನಮ್ಮ ಜಾತಿಯನ್ನು ಎ.ಕೆ. ಎ.ಡಿ.ಯಿಂದ ಬಿಡುಗಡೆ ಮಾಡಿ ನಮ್ಮ ಮೂಲ ಜಾತಿಗಳಿಂದ ಅಂದರೆ ಮಾದಿಗ ಮತ್ತು ಸಂಬಂಧಿತ ಜಾತಿಗಳಿಂದ ಗುರುತಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಉದಾಹರಣೆಗಾಗಿ ಹಾಸನ ಜಿಲ್ಲೆಯಲ್ಲಿ ಮಾದಿಗ ಸಮಾಜವನ್ನು ಆದಿ ದ್ರಾವಿಡ ಎಂತಲೂ ಆದರೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಇದೇ ಮಾದಿಗ ಸಮಾಜವನ್ನು ಆದಿ ಕರ್ನಾಟಕ ಎಂತಲೂ ಕರೆಯುತ್ತಿದ್ದು ಜಾತಿ ಪ್ರಮಾಣ ಪತ್ರಗಳೂ ಕೂಡ ಅದೇ ರೀತಿ ಇರುತ್ತವೆ. ಈಗಾಗಲೇ ಸೋರಿಕೆಯಾಗಿರುವ ಎ.ಜೆ. ಸದಾಶಿವ ಆಯೋಗದ ವರದಿಯ ಜನಗಣತಿಯಲ್ಲಿ ಹಾಸನ ಜಿಲ್ಲೆಯಲ್ಲಿ ಕೇವಲ ೨೬ ಸಾವಿರ ಜನಸಂಖ್ಯೆ ಇದೆ ಎಂದು ತಿಳಿದು ಬಂದಿರುತ್ತದೆ. ಆದರೆ ಅರಸೀಕೆರೆ ತಾಲೂಕಿನಲ್ಲಿಯೇ ೨೬ ಸಾವಿರ ಮತದಾರರು ಇದ್ದು, ಜಿಲ್ಲೆಯಲ್ಲಿ ಸುಮಾರು ೧ ಲಕ್ಷದ ೨೫ ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ನಿಖರವಾಗಿ ದತ್ತಾಂಶವನ್ನು ಪಡೆಯಬೇಕೆಂದು ಆಯೋಗ ಮತ್ತು ಸರ್ಕಾರದಲ್ಲಿ ಆಗ್ರಹ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರವು ಎ.ಕೆ.ಎ.ಡಿ.ಯನ್ನು ಕೈ ಬಿಟ್ಟು ಗಣತಿ ಮಾಡಿದ್ದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಮೂಲ ಜಾತಿಗಳಿಂದ ಗುರುತಿಸಿಕೊಂಡು ನಿಖರವಾದ ಅಂಕಿ ಸಂಖ್ಯೆ, ಸರ್ಕಾರ ಮತ್ತು ಆಯೋಗಕ್ಕೆ ಹಾಗೂ ಸಮಾಜಕ್ಕೆ ದಕ್ಕೆ ಗೊಂದಲ ನಿವಾರಣೆಯಾಗುತ್ತದೆ ಎಂದರು. ಈ ನಿವಾರಣೆಯನ್ನು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖೇನ ಮುಖ್ಯಮಂತ್ರಿಗಳಿಗೆ ರವಾನಿಸಲಾಗುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಎಚ್.ಕೆ. ಸಂದೇಶ್, ಎಂ.ಆರ್. ವೆಂಕಟೇಶ್, ಜಾವಗಲ್ ಇಂದ್ರೇಶ್, ಸಿಐಟಿಯು ಧರ್ಮೇಶ್, ಕೃಷ್ಣದಾಸ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ರಾಜಶೇಖರ್, ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))