‘ಗಡಿ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಿ’

| Published : Jun 21 2024, 01:08 AM IST

ಸಾರಾಂಶ

ಸೋಲಾರ್ ಫೆನ್ಷಿಂಗ್ ಅಳವಡಿಕೆಗೆ ಅರಣ್ಯ ಅಧಿಕಾರಿಗಳಿಗೆ ಒತ್ತಡ ಹೇರಿದ ಪರಿಣಾಮ ಸೋಲಾರ್ ಫೆನ್ಷಿಂಗ್ ಕಾರ್ಯಪೂರ್ಣಗೊಂಡಿದೆ. ಸೋಲಾರ್ ಫೆನ್ಷಿಂಗ್ ಶಾಶ್ವತ ಪರಿಹಾರ ಅಲ್ಲದ ಕಾರಣ ಆನೆ ಕಾರಿಡಾರ್ ಯೋಜನೆ ಅನುಷ್ಠಾನ ಮಾಡಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಆನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕರುಣಿಸಬೇಕೆಂದು ದೋಣಿಮಡಗು ಗ್ರಾಮ ಪಂಃಯ ಜೆಡಿಎಸ್ ಮುಖಂಡರು ನೂತನ ಸಂಸದ ಎಂ. ಮಲ್ಲೇಶಬಾಬುರನ್ನು ಒತ್ತಾಯಿಸಿದರು.ಕೋಲಾರದಲ್ಲಿರುವ ಸಂಸದರ ನಿವಾಸದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಮುಖಂಡರು, ಸಂಸದ ಮಲ್ಲೇಶಬಾಬು ಸಂಸದರಾಗುವುದಕ್ಕೂ ಮೊದಲು ಗಡಿ ಗ್ರಾಮಗಳ ಜನರ ಸ್ಥಿತಿಗತಿಗಳನ್ನು ಹಾಗೂ ಅಲ್ಲಿನ ಜನರು ಎದುರಿಸುತ್ತಿರುವ ಆನೆಗಳ ಹಾವಳಿಯನ್ನು ಖುದ್ದು ಭೇಟಿ ನೀಡಿ ಅವಲೋಕಿಸಿದ್ದಾರೆ. ಆನೆಗಳ ದಾಳಿಯಿಂದ ಬೆಳೆ ನಷ್ಟವಾದಾಗ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿ ಜತೆಗೆ ಆನೆಗಳು ಗ್ರಾಮಗಳತ್ತ ಬಾರದಂತೆ ಧ್ವನಿವರ್ಧಕ ವಿತರಿಸಿದ್ದನ್ನು ಸ್ಮರಿಸಿದರು.ಆನೆ ಕಾರಿಡಾರ್‌ ಯೋಜನೆ

ಸೋಲಾರ್ ಫೆನ್ಷಿಂಗ್ ಅಳವಡಿಕೆಗೆ ಅರಣ್ಯ ಅಧಿಕಾರಿಗಳಿಗೆ ಒತ್ತಡ ಹೇರಿದ ಪರಿಣಾಮ ಸೋಲಾರ್ ಫೆನ್ಷಿಂಗ್ ಕಾರ್ಯಪೂರ್ಣಗೊಂಡಿದೆ. ಆದರೂ ಆನೆಗಳು ಆಗಾಗ ಗ್ರಾಮಗಳ ಕಡೆ ಬಂದು ಆತಂಕ ಮೂಡಿಸುತ್ತಿದೆ. ಸೋಲಾರ್ ಫೆನ್ಷಿಂಗ್ ಶಾಶ್ವತ ಪರಿಹಾರ ಅಲ್ಲದ ಕಾರಣ ಆನೆ ಕಾರಿಡಾರ್ ಯೋಜನೆ ಅನುಷ್ಠಾನ ಮಾಡಿದರೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತದೆ. ಈ ಯೋಜನೆ ಜಾರಿಗೆ ಸಂಸದರು ಮುಂದಾಗಬೇಕೆಂದು ಮನವಿ ಮಾಡಿದರು.

ಸಮಸ್ಯೆ ಪರಿಹರಿಸುವ ಭರವಸೆ

ಅಲ್ಲದೆ ಗಡಿಗ್ರಾಮಗಳ ಸಂಪರ್ಕ ರಸ್ತೆಗಳು ಹದಗೆಟ್ಟಿದೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಹಂತ ಹಂತವಾಗಿ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆ ಸೇರಿ ಇತರೆ ಯೋಜನೆಗಳಿಂದ ರಸ್ತೆಗಳ ಅಭಿವೃದ್ಧಿಗೆ ಸಂಸದರು ಹೆಚ್ಚಿನ ಕಾಳಜಿವಹಿಸಬೇಕೆಂದು ಒತ್ತಾಯಿಸಿದರು. ಎಲ್ಲಾ ಸಮಸ್ಯೆಗಳಿಗೆ ಸಂಸದ ಮಲ್ಲೇಶಬಾಬು ಸಕಾರಾತ್ಮಕವಾಗಿ ಸ್ಪಂದಿಸಿ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಮುಖಂಡರಾದ ನಂಜಪ್ಪ, ಅಪೇಗೌಡ, ಜಗದೀಶ್, ಅಮರೇಶ್, ಚಂದ್ರಪ್ಪ, ನಂದೀಶ್ ಮತ್ತಿತರರು ಇದ್ದರು.