ಮೇಲುಕೋಟೆಯಲ್ಲಿ 16 ರಂದು ‘ರಥಸಪ್ತಮಿ’ ಉತ್ಸವ

| Published : Feb 12 2024, 01:32 AM IST / Updated: Feb 12 2024, 04:38 PM IST

ಸಾರಾಂಶ

ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 25ನೇ ವರ್ಷದ ಈ ಜನಪದ ಹಬ್ಬದಲ್ಲಿ 60 ಜಾನಪದ ಕಲಾಪ್ರಕಾರಗಳ 700 ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ವೈವಿಧ್ಯಮಯ ಕಲಾಪ್ರದರ್ಶನ ನೀಡುವರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಫೆ.16 ರಂದು ಚೆಲುವನಾರಾಯಣಸ್ವಾಮಿಯ ರಥಸಪ್ತಮಿ ಉತ್ಸವ ರಾಜ್ಯಮಟ್ಟದ ಜನಪದ ಕಲಾ ಮೇಳದ ಸಂಭ್ರಮದೊಂದಿಗೆ ನೆರವೇರಲಿದೆ.

ಜಾನಪದ ಕಲೆ ಸೊಬಗನ್ನು ಸವಿಯಲು ಮೇಲುಕೋಟೆಯ ರಥಸಪ್ತಮಿಗೆ ಬನ್ನಿ ಎಂಬ ಘೋಷವಾಕ್ಯದೊಂದಿಗೆ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 25ನೇ ವರ್ಷದ ಈ ಜನಪದ ಹಬ್ಬದಲ್ಲಿ 60 ಜಾನಪದ ಕಲಾಪ್ರಕಾರಗಳ 700 ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ವೈವಿಧ್ಯಮಯ ಕಲಾಪ್ರದರ್ಶನ ನೀಡುವರು.

ಇದಕ್ಕೂ ಪೂರ್ವಭಾವಿಯಾಗಿ ಫೆ.15 ರಂದು ರಥಸಪ್ತಮಿ ಜಾನಪದ ಸಂಜೆ ನಡೆಯಲಿದೆ. ಜನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರನ್ನು ಗೌರವಿಸಲಾಗುತ್ತದೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸ್ಥಾನೀಕರೂ ಆಗಿದ್ದ ನಾಗರಾಜ ಅಯ್ಯಂಗಾರ್ ಮೂರು ದಶಕಗಳ ಹಿಂದೆ ಸ್ಥಾನೀಕಂ ಸಾಂಸ್ಕೃತಿಕ ವೇದಿಕೆ ಮೂಲಕ ರಥಸಪ್ತಮಿ ಉತ್ಸವವನ್ನು ಜನಪದ ಸಂಸ್ಕೃತಿ ವೇದಿಕೆಯನ್ನಾಗಿ ರೂಪಿಸಿದರು. 

ಜಾನಪದ ಕಲಾ ಮೇಳವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ದೇಗುಲಕ್ಕೆ ಚೆಲುವನಿಗೆ ಸ್ವರ್ಣಲೇಪಿತ ನೂತನ ಸೂರ್ಯಮಂಡಲ ವಾಹನವೂ ಸಮರ್ಪಿತವಾಗಿದೆ ಎಂದು ಸಂಘಟಕರಾದ ಪತ್ರಕರ್ತೆ ಸೌಮ್ಯಸಂತಾನಂ ಮತ್ತು ಕಲಾವಿದ ಆರ್.ಶಿವಣ್ಣಗೌಡ, ಪತ್ರಕರ್ತೆ ಶಾಲಿನಿ ಸಿಂಹ ತಿಳಿಸಿದ್ದಾರೆ.

ಹಲವು ಕಲಾ ತಂಡಗಳು ಭಾಗಿ: ಮೇಲದಲ್ಲಿ ಡೊಳ್ಳುಕುಣಿತ, ಪಟಾ ಕುಣಿತ, ಗಾರುಡಿ ಗೊಂಬೆ, ಕೋಲಾಟ, ಚಿಲಪಿಲಿ ಗೊಂಬೆ, ಪೂಜಾ ಕುಣಿತ, ಮಂಗಳ ವಾದ್ಯ, ಬ್ರಾಸ್ ಬ್ಯಾಂಡ್, ಮೈಸೂರು ನಗಾರಿ, ನೃತ್ಯ ತಮಟೆ, ವೀರಮಕ್ಕಳ ಕುಣಿತ, ಜಡೆ ಕೋಲಾಟ, ದಾಸಯ್ಯರ ದರ್ಶನ, ಬೆಂಕಿ ಭರಾಟೆ, ಖಡ್ಗಪವಾಡ, ವೀರಭದ್ರನ ನೃತ್ಯ, ಜಾಂಜ್ ಮೇಳ. 

ನಾಸಿಕ್ ಡೋಲ್, ಮರಗಾಲು ಕುಣಿತ, ಯಕ್ಷಗಾನ ಗೊಂಬೆಗಳು, ಕರಡಿ ಮಜಲು, ಗ್ರಾಮೀಣ ಮಂಗಳವಾದ್ಯ ಸ್ಯಾಕ್ಸ್ ಪೋನ್ ತಂಡಗಳು ಮೈಸೂರು ಜಿಲ್ಲೆಯ ಬ್ರಾಸ್ ಬ್ಯಾಂಡ್, ವಿಶೇಷ ತಮಟೆ ಮೇಳ, ಮೈಸೂರು ನಗಾರಿ, ನವಿಲಿನ ನೃತ್ಯ ತಲಕಾಡಿನ ಬೃಹತ್ ಹನುಮಾನ್.

ಚಾಮರಾಜನಗರದ ಹುಲಿವೇಷ, ಉಡುಪಿಯ ಚಂಡೆ ಮೇಳ, ಹನುಮ ಮತ್ತು ಘಟೋದ್ಗಜ, ಕೋಳಿಹುಂಜಗಳು ಮತ್ತು ಸಿಂಹನೃತ್ಯ, ಕೇರಳದ ಚಂಡೆ, ಹುಬ್ಬಳ್ಳಿಯ ಜಗ್ಗಲಿಗೆ ಮೇಳ, ಹಗಲುವೇಷ, ಭಜನಾತಂಡ ಸೇರಿ ರಾಜ್ಯದ 60ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಲಿವೆ.

ವಿವಿಧ ಶಾಲೆಗಳ 300ಕ್ಕೂ ಹೆಚ್ಚು ಪುಟಾಣಿಗಳು ನೂರೊಂದು ಕಳಸ, ವೇಷಭೂಷಣ ಹಾಗೂ ಇತರ ಪ್ರತಿಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 

ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಾಲ ಮಂಜುನಾಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ , ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ದಂಪತಿ ಬೆಳ್ಳಿಹಬ್ಬದ ಕಲಾಮೇಳ ಉದ್ಘಾಟಿಸಿ ರಥಸಪ್ತಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್ ನಾಗರಾಜು, ಗ್ರಾಪಂ ಅಧ್ಯಕ್ಷ ಎನ್. ಸೋಮಶೇಖರ್ ಭಾಗವಹಿಸುವರು. 

ರಥಸಪ್ತಮಿ ಹಾಗೂ ರಾಜ್ಯ ಮಟ್ಟದ ಜನಪದ ಕಲಾಮೇಳವು ವರ್ಷದಿಂದ ವರ್ಷಕ್ಕೆ ಆಕರ್ಷಕವಾಗಿ ನಡೆಯುತ್ತಾ ಬಂದಿದೆ ಎಂದು ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ತಿಳಿಸಿದ್ದಾರೆ.