ಅನುದಾನ, ಅಭಿವೃದ್ಧಿ ಮಾಹಿತಿಗೆ ಆಗ್ರಹ

| Published : Feb 11 2024, 01:46 AM IST

ಸಾರಾಂಶ

ತಾವು ಶಾಸಕರಾಗಿ 1 ವರ್ಷ ಪೂರೈಸುವ ಹೊಸ್ತಿಲಲ್ಲಿದ್ದು, ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಮತಕೊಟ್ಟ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕಾಗಿದೆ ಎಂದು ಬಿಜೆಪಿ ಕಾರ್ಯರ್ತರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಮ್ಮ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ತಂದಿರುವ ಅನುದಾನ, ಸರ್ಕಾರದಿಂದ ಈ ಅವಧಿಯಲ್ಲಿ ಬಿಡುಗಡೆ ಮಾಡಿರುವ ಅನುದಾನದ ವಿವರ ಹಾಗೂ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ಒದಗಿಸುವಂತೆ ಆಗ್ರಹಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಶಾಸಕ ಆಸೀಫ್‌ ಸೇಠ್ ಅವರ ಮನೆಗೆ ತೆರಳಿ ಮನವಿ ಸಲ್ಲಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸಿರುವ ಕಾಂಗ್ರೆಸ್ ಪಕ್ಷ ಹಾಗೂ ತಮ್ಮ ಮೇಲೆ ಭರವಸೆಯಿಟ್ಟು ಕ್ಷೇತ್ರದ ಮತದಾರರು ತಮ್ಮನ್ನು ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ತಾವು ಶಾಸಕರಾಗಿ 1 ವರ್ಷ ಪೂರೈಸುವ ಹೊಸ್ತಿಲಲ್ಲಿದ್ದು, ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಮತಕೊಟ್ಟ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕಾಗಿದೆ ಎಂದು ಬಿಜೆಪಿ ಕಾರ್ಯರ್ತರು ಒತ್ತಾಯಿಸಿದರು.

ತಾವು ಶಾಸಕರಾದ ನಂತರ ಕ್ಷೇತ್ರಕ್ಕೆ ತಂದ ಹಾಗೂ ಈ ಸರ್ಕಾರದ ಅವಧಿಯಲ್ಲಿ ಇದುವರೆಗೂ ಬಿಡುಗಡೆಯಾದ ಅನುದಾನವೆಷ್ಟು, ಅನುದಾನ ಬಿಡುಗಡೆಯಾಗಿದ್ದರೆ ಅದರಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವುವು, ಕ್ಷೇತ್ರದ ಅಭಿವೃದ್ಧಿಗಾಗಿ ತಾವು ರೂಪಿಸಿದ ಹಾಗೂ ಚುನಾವಣಾ ಸಂದರ್ಭದಲ್ಲಿ ತಾವು ಕೊಟ್ಟ ಭರವಸೆಗಳಿಗನುಗುಣವಾಗಿ ರೂಪಿಸಿರುವ ಯೋಜನೆ ಮತ್ತು ಅದು ಅನುಷ್ಠಾನದಲ್ಲಿದ್ದರೆ ಮಾಹಿತಿ ನೀಡಿವುದು, ಕ್ಷೇತ್ರದಲ್ಲಿ ಬರದ ದವಡೆಗೆ ಸಿಲುಕಿ ನಲುಗಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಪರಿಹಾರ ಎಷ್ಟು? ಪರಿಹಾರ ಒದಗಿಸಿಕೊಟ್ಟಿದ್ದಲ್ಲಿ ಅದರ ವಿವರವನ್ನು ಒದಗಿಸುವಂತೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ನಿರುದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾಗಿರುವ ಉದ್ಯೋಗಗಳ ವಿವರ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾವು ಕೈಗೊಂಡ ಕ್ರಮ, ಬಡಜನರ ಕೈಗೆಟಕುವ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಹೊಸ ಯೋಜನೆಗಳು,ಈ ಅವಧಿಯಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಗಳು, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಪರಿಪೂರ್ಣಗೊಳಿಸಲು ಹೊಸದಾಗಿ ಕೈಗೊಂಡ ಕಾಮಗಾರಿಗಳ ವಿವರ, ಪ್ರಧಾನಿ ಮೋದಿ ಅವರ ಸರ್ಕಾರ ಕೊಡುತ್ತಿರುವ ಅನ್ನ ಭಾಗ್ಯದ 5. ಕೆ.ಜಿ ಅಕ್ಕಿ ಹೊರತುಪಡಿಸಿ ನೀವು ಎಷ್ಟು ಕೆ.ಜಿ. ಅಕ್ಕಿ ವಿತರಿಸಿದ್ದೀರಿ, ನಮ್ಮ ಹಿಂದಿನ ಶಾಸಕರು ಬಿಡುಗಡೆಗೊಳಿಸಿದ ಅನುದಾನವನ್ನು ಏಕೆ ಹಿಂಪಡೆದಿದ್ದೀರಿ ಎನ್ನುವ ದಾಖಲೆ ಸಹಿತ ಮಾಹಿತಿ ನೀಡುವುದು, ಹಾಗೂ ನಮ್ಮ ಹಿಂದಿನ ಶಾಸಕರು ಚಾಲನೆ ಕೊಟ್ಟ ಎಲ್ಲ ಕಾರ್ಯಗಳನ್ನು ನಿಲ್ಲಿಸಿದ್ದೇಕೆ? ಮತ್ತು ಯಾವಾಗ ಪೂರ್ಣಗೊಳಿಸುವಿರಿ ? ಎಂಬುವುದರ ಕುರಿತು ದಾಖಲೆಗಳ ಸಹಿತ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ತಮಗೆ ಮನವಿ ಸಲ್ಲಿಸಲು ಆಗಮಿಸಿದ್ದ ಪ್ರತಿಪಕ್ಷದ ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಿದ ಶಾಸಕ ಆಸೀಫ್‌ ಸೇಠ್‌, ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾರ್ಯ, ತಂದಿರುವ ಅನುದಾನ ಕುರಿತು ದಾಖಲೆ ಸಹಿತ ಕೊಡುವೆ ಎಂದು ತಿಳಿಸಿದರು. ಇದರಿಂದಾಗಿ ಮುಜುಗರಕ್ಕೀಡಾದ ಬಿಜೆಪಿ ಕಾರ್ಯಕರ್ತರು, ತಮಗೆ ಮುಜುಗರ ಮಾಡಲು ಬಂದಿಲ್ಲ, ಎಲ್ಲ ಕಡೆಗಳಲ್ಲಿ ಶಾಸಕರಿಗೆ, ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿರುವುದರಿಂದ ತಾವು ಕೂಡ ತಮಗೆ ಮನವಿ ಸಲ್ಲಿಸಲು ಬಂದಿದ್ದೇವೆ ಎಂದರು.

ನಂತರ ಬಿಜೆಪಿ ಕಾರ್ಯಕರ್ತರಿಗೆ ಚಹಾ ಕುಡಿಯಲು ತಿಳಿಸಿದರು. ಇದಕ್ಕೆ ನಿರಕಾರಿಸಿದ ಬಿಜೆಪಿ ಕಾರ್ಯಕರ್ತರಿಗೆ ನಾನು ನಿಮ್ಮ ಮನೆಗೆ ಬಂದಾಗ ಚಹಾ ಕೊಡುತ್ತಿರೋ ಇಲ್ಲೊ ಎಂದು ನಗುತ್ತಲೇ ಪ್ರಶ್ನಿಸಿದರು. ನಂತರ ಎಲ್ಲರೂ ಜತೆಯಾಗಿ ಅಭಿವೃದ್ಧಿ ಕಾರ್ಯ ಮಾಡೋಣ ಎಂದು ತಿಳಿಸಿದರು.

ಈ ವೇಳೆ ಶಿಲ್ಪಾ ಕೆಕರೆ, ದಾದಾಸಾಹೇಬ, ಸುಜಾತಾ ಪಾಟೀಲ, ಶರದ್‌ ಪಾಟೀಲ, ವಿಜಯ ಕೊಡಗಾನೂರು ಸೇರಿದಂತೆ ಮೊದಲಾದವರು ಇದ್ದರು.