ಮತದಾನ ಬಹಿಷ್ಕರಿಸದಿರಲು ಮನವಿ

| Published : Apr 09 2024, 12:54 AM IST

ಸಾರಾಂಶ

ತಾಲೂಕು ರಚನೆ ಬೇಡಿಕೆ ಈಡೇರದ ಹಿನ್ನೆಲೆ ಹೋರಾಟ ಸಮಿತಿಯವರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಹೋರಾಟಗಾರರು ಚುನಾವಣಾ ಬಹಿಷ್ಕಾರ ಚಿಂತನೆ ಕೈಬಿಡಬೇಕು. ಮತದಾನವನ್ನು ಕಡ್ಡಾಯವಾಗಿ ಮಾಡುವುದರ ಮೂಲಕ ನಿಮ್ಮ ಹಕ್ಕನ್ನು ನೀವು ಪಡೆದುಕೊಳ್ಳಬೇಕು ಎಂದು ವಿಶೇಷ ಚುನಾವಣೆ ಅಧಿಕಾರಿ ಸಾಜೀದ್ ಮುಲ್ಲಾ ಅವರು ತಾಲೂಕು ಹೋರಾಟಗಾರರಿಗೆ ಮನವಿ ಮಾಡಿದರು.

ತಾಲೂಕು ರಚನೆ ಬೇಡಿಕೆ ಈಡೇರದ ಹಿನ್ನೆಲೆ ಹೋರಾಟ ಸಮಿತಿಯವರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದೆ. ಈ ಹಿನ್ನೆಲೆ ಸೋಮವಾರ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಮತದಾನದ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಯಿತು. ಜೊತೆಗೆ ಏ.10ರ ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತುಕತೆಗೆ ಹೋರಾಟಗಾರರಿಗೆ ಆಹ್ವಾನಿಸಲಾಯಿತು.

ಸಭೆಯ ನಂತರ ಮಾತನಾಡಿದ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಈಗಾಗಲೇ 721 ದಿನಗಳ ಕಾಲ ಹೋರಾಟ ನಡೆದಿದೆ. ನಮ್ಮ ಹೋರಾಟ ನಿರಂತರವಾಗಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಇಷ್ಟೊಂದು ದಿನಗಳ ಕಾಲ ನಾವು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಈ ಬಾರಿ ಶತಾಯಗತಾಯ ತಾಲೂಕಿನ ಬಗ್ಗೆ ನಿರ್ಣಯವಾಗಬೇಕು. ಮುಧೋಳ ತಾಲೂಕಿನಲ್ಲಿ ಮಹಾಲಿಂಗಪುರ ಸೇರಿಸುವುದು. 14 ಹಳ್ಳಿಗಳನ್ನು ಸೇರಿಸಿ ಹೋಬಳಿ ಮಾಡುವ ಕುರಿತು ಚರ್ಚೆಯಾಗಿ ಎರಡು ತಿಂಗಳಲ್ಲಿ ಫೈಲ್ ಮಾಡುವುದಾಗಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದರು. ಆದರೆ, ಈಗಾಗಲೇ ನಾಲ್ಕು ತಿಂಗಳು ಕಳೆದರೂ ಇನ್ನೂ ಕೂಡ ಯಾವುದೇ ಮಾಹಿತಿ ಬರದೇ ಬಂದಿಲ್ಲ. ಆದ್ದರಿಂದ ಚುನಾವಣಾ ಬಹಿಷ್ಕಾರಕ್ಕೆ ಮಾಡುವುದು ನಮ್ಮ ಜನರ ಚಿಂತನೆ ಆಗಿದೆ ಎಂದು ತಿಳಿಸಿದರು.

ಮಹದೇವ್ ಮರಾಪುರ್ ಮಾತನಾಡಿ, 32 ವರ್ಷಗಳಿಂದ ಈ ತಾಲೂಕಿನ ಹೋರಾಟ ನಡೆಯುತ್ತಿದೆ. ಎಲ್ಲ ಸರ್ಕಾರಗಳಿಂದ ನಮಗೆ ಅನ್ಯಾಯವಾಗಿದೆ. ಅನೇಕ ಸಲ ಮುಖ್ಯಮಂತ್ರಿಗಳನ್ನು ಭೇಟಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಭೌಗೋಳಿಕವಾಗಿ ಎಲ್ಲ ಅರ್ಹತೆ ಹೊಂದಿರುವ ಮಹಾಲಿಂಗಪುರ ತಾಲೂಕು ಆಗಬೇಕು. ಇದಕ್ಕೆ ಬೇಕಾದಂತಹ ಎಲ್ಲ ದಾಖಲೆಗಳನ್ನು ತಾವು ಒದಗಿಸಿ ಸರ್ಕಾರಕ್ಕೆ ತಲುಪಿಸಬೇಕು. ತಮ್ಮ ಮೂಲಕ ನಾವುಗಳು ಈ ನಿರ್ಣಯವನ್ನು ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದರ ಮೂಲಕ ನಿರ್ಣಯಿಸುತ್ತೇವೆ ಎಂದರು.

ಈ ವೇಳೆ ಮುಖಂಡ ಶಿವಲಿಂಗ ಟಿರಕಿ, ಸಿದ್ದಪ್ಪ ಶಿರೋಳ್, ಜಯರಾಂ ಶೆಟ್ಟಿ, ರಾಜೇಂದ್ರ ಮಿರ್ಜಿ, ವೀರೇಶ್ ಆಸಂಗಿ, ರಫೀಕ್ ಮಾಲ್ದಾರ ಇದ್ದರು.