ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯದ ಮೇಲ್ವಿಚಾರಕರನ್ನಾಗಿ ಸರ್ಕಾರ ನೇಮಕ ಮಾಡಿಕೊಳ್ಳದಿರುವುದಕ್ಕೆ ಖಾಸಗಿ ಶಾಲಾ ಸಂಘಟನೆ ರುಪ್ಸಾ ಆಕ್ಷೇಪ ವ್ಯಕ್ತಪಡಿಸಿದ್ದು, ನಮ್ಮ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೂ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಮಾ.25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರನ್ನಾಗಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ. ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರನ್ನು ಈ ಕಾರ್ಯದಿಂದ ದೂರ ಇಟ್ಟಿರುವುದು ಮಲತಾಯಿ ಧೋರಣೆಯಾಗಿದೆ. ಮೌಲ್ಯಮಾಪನ ಕಾರ್ಯಕ್ಕೆ ಮಾತ್ರ ಈ ಶಿಕ್ಷಕರು ಬೇಕು, ಪರೀಕ್ಷಾ ಕಾರ್ಯಕ್ಕೆ ಬೇಡ ಎನ್ನುವುದು ಎಷ್ಟು ಸರಿ? ಪರೀಕ್ಷಾ ಕಾರ್ಯಗಳಿಗೆ ಸರ್ಕಾರಿ, ಅನುದಾನಿತ ಶಾಲಾ ಶಿಕ್ಷಕರಷ್ಟೇ ಅನುದಾನರಹಿತ ಶಾಲಾ ಶಿಕ್ಷಕರೂ ಸಮರ್ಥರಿದ್ದಾರೆ. ಅವರ ಸೇವೆಯನ್ನೂ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯದಿಂದ ದೂರ ಇರುವಂತೆ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರನ್ನು ಪರೀಕ್ಷಾ ಮೇಲ್ವಿಚಾರಕರನ್ನಾಗಿ ಹಿಂದಿನಿಂದಲೂ ನೇಮಿಸಿಕೊಂಡಿಲ್ಲ. ಈಗಲೂ ಅದನ್ನೇ ಮುಂದುವರೆಸಲಾಗಿದೆ. ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಆರೋಪಗಳು ಕೇಳಿ ಬಂದಾಗ ಖಾಸಗಿ ಶಾಲಾ ಶಿಕ್ಷಕರನ್ನು ಜವಾಬ್ದಾರರನ್ನಾಗಿಸಿ ಶಿಕ್ಷಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವುದಿಲ್ಲ ಎಂದು ಹೇಳುತ್ತಾರೆ.