ಸಾರಾಂಶ
ಅಕ್ಷರದವ್ವ ಸಾವಿತ್ರಿಭಾಯಿ ಫುಲೆ ಅಂದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಟೊಂಕಕಟ್ಟಿ ನಿಲ್ಲದಿದ್ದರೆ ಇಡೀ ದೇಶದ ಮಹಿಳೆಯರ ಸ್ಥಿತಿ ಇಂದು ಅದೇಷ್ಟು ಹೀನಾಯವಾಗಿರುತಿತ್ತು
ಮಹಾಲಿಂಗಪುರ:
ಅಕ್ಷರದವ್ವ ಸಾವಿತ್ರಿಭಾಯಿ ಫುಲೆ ಅಂದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಟೊಂಕಕಟ್ಟಿ ನಿಲ್ಲದಿದ್ದರೆ ಇಡೀ ದೇಶದ ಮಹಿಳೆಯರ ಸ್ಥಿತಿ ಇಂದು ಅದೇಷ್ಟು ಹೀನಾಯವಾಗಿರುತಿತ್ತು ಎಂದು ಊಹಿಸಿಕೊಳ್ಳುವುದೂ ಅಸಾಧ್ಯ ಎಂದು ಶಿಕ್ಷಕಿ ಸುಜಾತಾ ಹೊಸಕೇರಿ ಹೇಳಿದರು.ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಭಾಯಿ ಫುಲೆ ಜಯಂತಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಗು ಶಿಕ್ಷಣ ಪಡೆದರೆ ಅವಳ ಗಂಡ ಹುಳು ಬಿದ್ದು ಸಾಯುತ್ತಾನೆ ಎಂದು ಬಲವಾಗಿ ನಂಬಿದ್ದ ಕಾಲದಲ್ಲಿ ಸಮಾಜದ ಸಾಕಷ್ಟು ಪ್ರತಿರೋಧದ ನಡುವೆಯೂ ದಿಟ್ಟವಾಗಿ ನಿಂತು ಸಾರ್ವಜನಿಕರಿಂದ ಸಗಣಿ, ಕೆಸರಿನ ಹೊಡೆತ ಬಿದ್ದಾಗಲೂ ಹಿಂಜರಿಯದೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದ ಪ್ರತಿಫಲವೇ ಇಂದಿನ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿ ಎಂದರು.
ಶಾಲೆಯ ಗುರುಮಾತೆಯರನ್ನು ವಿದ್ಯಾರ್ಥಿಗಳು ವಾದ್ಯಗೋಷ್ಠಿಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಹೂಮಳೆಗರೆಯುತ್ತಾ ವೇದಿಕೆಗೆ ಕರೆತಂದರು. ಮಕ್ಕಳೇ ಏರ್ಪಡಿಸಿದ್ದ ಜಾನಪದ ಆಟಗಳಾದ ಗಾಲಿ ಉರುಳಿಸುವ ಆಟ, ಹಗ್ಗ ಜಗ್ಗಾಟ ಆಟಗಳನ್ನು ಆಡಿದ ಶಿಕ್ಷಕಿಯರು ಗೆದ್ದಾಗ ಮಕ್ಕಳೇ ಬಹುಮಾನ ನೀಡಿ ಗೌರವಿಸಿದರು. ಗಾಲಿ ಉರುಳಿಸುವ ಆಟದಲ್ಲಿ ಶಿಕ್ಷಕಿ ಸುಜಾತ ಹೊಸಕೇರಿ ಪ್ರಥಮ, ಶಿಕ್ಷಕಿ ದೀಪಾ ಬಡಿಗೇರ ದ್ವಿತೀಯ ಹಾಗೂ ಹಗ್ಗ ಜಗ್ಗಾಟದಲ್ಲಿ ಶಿಕ್ಷಕಿ ಲಕ್ಷ್ಮೀ ಬಿದರಿ ತಂಡ ಗೆದ್ದು ಬಹುಮಾನ ಪಡೆದರು.ಸಾವಿತ್ರಿಭಾಯಿ ಫುಲೆ ಜಯಂತಿ ಪ್ರಯುಕ್ತ ಶಾಲೆಯ ಹೆಣ್ಣುಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡೆಗಳಲ್ಲಿ ಜಯಶಾಲಿಯಾದ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.
ಶಿಕ್ಷಕಿಯರಾದ ರೂಪಾ ಜಾಡಗೌಡರ, ಗಿರಿಜಾ ಸೊನ್ನದ, ಗಾಯತ್ರಿ ಅಂಬಿ, ತೇಜು ವಜ್ರಮಟ್ಟಿ, ಶಾರದಾ ಮನ್ನಯ್ಯನವರಮಠ, ತೃಪ್ತಿ ಕುಳ್ಳೊಳ್ಳಿ, ಪ್ರೀತಿ ಕಲ್ಯಾಣಿ, ಸರಸ್ವತಿ ಚನಪನ್ನವರ, ಶಮಾ ಗಲಗಲಿ, ಬಾನು ಕೆ.ಎಂ., ಪ್ರೇಮಾ ಕರಜಗಿ, ಸುಧಾ ಕೊಂಗವಾಡ, ವೀಣಾ ಹಡಪದ ಇತರರಿದ್ದರು. ಸಾಕ್ಷಿ ಗೊಂದಿ ಮತ್ತು ಮಹಾಲಕ್ಷ್ಮೀ ಗೊಂದಿ ಪ್ರಾರ್ಥಿಸಿದರು. ಲಕ್ಷ್ಮೀ ಅಮಾತಿ ಮತ್ತು ಸ್ಪಂದನಾ ಬಾರಕೋಲ ನಿರೂಪಿಸಿದರು.