ಬೆಂಬಲ ಬೆಲೆಗೆ ರಾಗಿ ಮಾರಾಟ: ಆರಂಭದಲ್ಲೇ ವಿಘ್ನ

| Published : Nov 03 2025, 01:15 AM IST

ಬೆಂಬಲ ಬೆಲೆಗೆ ರಾಗಿ ಮಾರಾಟ: ಆರಂಭದಲ್ಲೇ ವಿಘ್ನ
Share this Article
  • FB
  • TW
  • Linkdin
  • Email

ಸಾರಾಂಶ

ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಲು ರೈತರಿಗೆ ಬಯೋಮೆಟ್ರಿಕ್ ಕಡ್ಡಾಯ ಮಾಡಲಾಗಿದೆ. ನೋಂದಣಿ ಮಾಡಿಸಲು ಬರುತ್ತಿರುವ ಹಲವು ರೈತರಿಗೆ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಿಲ್ಲ. ರಾಗಿ ಮಾರಾಟಕ್ಕೆ ಪಹಣಿಯಲ್ಲಿ ನಮೂದಿಸಲ್ಪಟ್ಟಿರುವ ರೈತ ಮಾತ್ರ ಬಯೋಮೆಟ್ರಿಕ್ ನೀಡಬೇಕಿರುವ ಕಾರಣ ವಯಸ್ಸಾದ ಹಾಗೂ ಇನ್ನಿತರರು ಬಯೋಮೆಟ್ರಿಕ್ ಸ್ವೀಕಾರ ಆಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಉತ್ತಮ ದರ ನಿಗದಿ ಮಾಡಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಲು ಮುಂದಾಗಿರುವ ರೈತರಿಗೆ ಆರಂಭದಲ್ಲೇ ಸಮಸ್ಯೆಗಳು ಎದುರಾಗಿದೆ. ರೈತರು ಬೆಳೆಯುವಂತಹ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ಸರ್ಕಾರ ರಾಗಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಕಳೆದ ಹಲವು ವರ್ಷಗಳಿಂದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಮೂಲಕ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಇದರ ಮೂಲಕ ರಾಗಿಯನ್ನು ರೈತರಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡುವ ಮೂಲಕ ಸರ್ಕಾರ ರೈತರ ಆರ್ಥಿಕ ಪ್ರಗತಿಗೆ ದಿಟ್ಟ ಹೆಜ್ಜೆ ಇಟ್ಟಿದೆ.

೬ ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಗುರಿ

ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿದ ವರ್ಷದಿಂದ ಈ ವರ್ಷ ಅತೀ ಹಚ್ಚಿನ ಬೆಲೆಯನ್ನು ನಿಗದಿ ಮಾಡಿದ್ದು, ಪ್ರತಿ ಕ್ವಿಂಟಾಲ್ ರಾಗಿಯನ್ನು ೪೮೮೬ ರೂಗಳಿಗೆ ರೈತರಿಂದ ಖರೀದಿ ಮಾಡಲಾಗುತ್ತಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ ೪೨೯೦ ರೂಗಳಂತೆ ಖರೀದಿ ಮಾಡಿದ್ದ ಸರ್ಕಾರ ಈ ವರ್ಷ ಸುಮಾರು ೬ ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಗುರಿಯನ್ನು ಹೊಂದಿದೆ.

ಸರಕಾರ ಅ.೧ ರಿಂದ ಡಿ.೨೧ರವರೆಗೂ ರಾಗಿ ಮಾರಾಟಕ್ಕೆ ರೈತರಿಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಈ ಹಿಂದೆ ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನಂತೆ ಗರಿಷ್ಟ ೨೦ ಕ್ವಿಂಟಾಲ್‌ ವರೆಗೂ ಒಬ್ಬ ರೈತ ರಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ ಈ ವರ್ಷ ೫೦ ಕ್ವಿಂಟಾಲ್‌ವರೆಗೂ ಅವಕಾಶ ನೀಡಿರುವುದರಿಂದ ದೊಡ್ಡ ರೈತರಿಗೆ ಶುಕ್ರದೆಸೆ ಬಂದಂತಾಗಿದೆ.

ಜನವರಿ ೧ರಿಂದ ರಾಗಿ ಖರೀದಿ

ಇನ್ನೂ ನೋಂದಾಯಿಸಿದ ರೈತರಿಂದ ರಾಗಿ ಖರೀದಿಗೆ ೨೦೨೬ರ ಜ.೧ ರಿಂದ ಮಾ.೩೧ ರತನಕ ಅವಧಿ ನಿಗದಿ ಮಾಡಲಾಗಿರುವ ಕಾರಣ ರೈತರು ಖರೀದಿ ಕೇಂದ್ರಗಳತ್ತ ನೋಂದಾಯಿಸಲು ಮುಖ ಮಾಡಿದ್ದಾರೆ. ಆದರೆ ನೋಂದಣಿ ಮಾಡಿಕೊಳ್ಳಲು ಬರುತ್ತಿರುವ ರೈತರಿಗೆ ವಿವಿಧ ಸಮಸ್ಯೆಗಳು ಕಾಡಲಾರಂಭಿಸಿದ್ದು, ಪರಿಹಾರ ಕಂಡುಕೊಳ್ಳಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ಬಯೋಮೆಟ್ರಿಕ್ ಸಮಸ್ಯೆ

ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಲು ರೈತರಿಗೆ ಬಯೋಮೆಟ್ರಿಕ್ ಕಡ್ಡಾಯ ಮಾಡಲಾಗಿದೆ. ನೋಂದಣಿ ಮಾಡಿಸಲು ಬರುತ್ತಿರುವ ಹಲವು ರೈತರಿಗೆ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಕುಟುಂಬದ ಮುಖ್ಯಸ್ಥರ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ ಎಂದರೆ ಕುಟುಂಬದಲ್ಲಿ ಯಾರಾದರೂ ಬಂದು ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಬಹುದು. ಆದರೆ ರಾಗಿ ಮಾರಾಟಕ್ಕೆ ಪಹಣಿಯಲ್ಲಿ ನಮೂದಿಸಲ್ಪಟ್ಟಿರುವ ರೈತ ಮಾತ್ರ ಬಯೋಮೆಟ್ರಿಕ್ ನೀಡಬೇಕಿರುವ ಕಾರಣ ವಯಸ್ಸಾದ ಹಾಗೂ ಇನ್ನಿತರರು ಬಯೋಮೆಟ್ರಿಕ್ ಸ್ವೀಕಾರ ಆಗುತ್ತಿಲ್ಲ. ಇದರಿಂದ ರಾಗಿ ನೋಂದಣಿ ಮಾಡಿಸಲು ರೈತರು ಪರದಾಡುವಂತಾಗಿದೆ.

ಫೂಟ್ ತಂತ್ರಾಂಶ ಬೆಳೆ ನಾಪತ್ತೆ

ಎಲ್ಲ ಸರಿ ಇದ್ದು, ನೊಂದಣಿ ಮಾಡಿಸಲು ಬರುವಂತಹ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ರಾಗಿ ಬೆಳೆ ಬೆಳೆದಿದ್ದರೂ ಫೂಟ್ ತಂತ್ರಾಂಶದಲ್ಲಿ ರಾಗಿ ಬೆಳೆ ಕಾಣಿಸದ ಪರಿಣಾಮ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರ ಜಮೀನಿನಲ್ಲಿ ಇರುವ ರಾಗಿ ಬೆಳೆ ಬದಲಾಗಿ ಬೇರೊಂದು ಬೆಳೆ ಅಥವಾ ಬೆಳೆ ಇಲ್ಲವೆಂದು ನಮೂದು ಮಾಡಿರುವುದರಿಂದ ರೈತರಿಗೆ ಸಮಸ್ಯೆ ಬಿಗಡಾಯಿಸಿದೆ. ಇದರಿಂದಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ರಾಗಿ ಮಾರಾಟಕ್ಕೆ ರೈತರು ಕೃಷಿ ಮತ್ತು ಕಂದಾಯ ಇಲಾಖೆಗಳಿಗೆ ಸುತ್ತಾಡುವಂತಹ ಪ್ರಮೇಯ ಎದುರಾಗಿದೆ.