ರಸ್ತೆಬದಿ ವ್ಯಾಪಾರಿಗಳನ್ನು ಹಾಗೂ ತಳ್ಳುವ ಗಾಡಿಗಳ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ನಗರಸಭೆಯಿಂದ ಗುರುತಿನ ಚೀಟಿ ನೀಡಲಾಗುವುದು. ರಸ್ತೆ ಸುರಕ್ಷತಾ ಕ್ರಮವಾಗಿ ಸಾರ್ವಜನಿಕರಿಗೆ, ವೃದ್ದರು ಮಹಿಳೆಯರ ಹಾಗೂ ವಾಹನಗಳ ಸಂಚಾರಕ್ಕೆ ಆಡಚಣೆಯಾಗದಂತೆ ಸೂಚಿಸಿರುವ ಮಾರ್ಗಸೂಚಿಯಂತೆ ಬೀದಿಬದಿ ವ್ಯಾಪಾರಿಗಳಿಗೂ ಬದುಕುಕಟ್ಟಿಕೊಡಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ಆಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಸೂಚನೆಯಂತೆ ಶೀಘ್ರದಲ್ಲೇ ‘ವೆಂಡರ್ ಜೋನ್‌’ ಯೋಜನೆ ಜಾ ರಿಗೆ ತರಲಾಗುವುದು ಎಂದು ನಗರಸಭಾ ಪೌರಾಯುಕ್ತ ನವೀನ್ ಚಂದ್ರ ತಿಳಿಸಿದರು. ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಹಾಗೂ ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ದೊಡ್ಡಪೇಟೆಯ ತರಕಾರಿ ಮಾರುಕಟ್ಟೆ ಸಮೀಪದ ಆಚಾರ ಬೀದಿಯಲ್ಲಿರುವ ಇ.ಟಿ.ಸಿ.ಎಂ. ಕಾಪೌಂಡ್‌ಗೆ ಹೊಂದಿಕೊಂಡ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಶೆಡ್‌ಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ಅದೇ ರೀತಿ ನಗರ ಹೊರವಲಯದ ಕೆ.ಯು.ಡಿ.ಎ. ಪಾರ್ಕ್ ಸಮೀಪದ ಮೆಡಿಕಲ್ ಕಾಲೇಜಿನ ರಸ್ತೆ ಬದಿಯ ವ್ಯಾಪಾರಿಗಳನ್ನು ಶೀಘ್ರದಲ್ಲೆ ತೆರವುಗೊಳಿಸಿ ಅವರಿಗೂ ಸಹ ಸಮೀಪದಲ್ಲಿ ಮಾರಾಟ ವಲಯಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ವೆಂಡರ್ಸ್‌ ಜೋನ್ ಸಮಿತಿ ರಚನೆ

ರಸ್ತೆಬದಿ ವ್ಯಾಪಾರಿಗಳನ್ನು ಹಾಗೂ ತಳ್ಳುವ ಗಾಡಿಗಳ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ನಗರಸಭೆಯಿಂದ ಗುರುತಿನ ಚೀಟಿ ನೀಡಲಾಗುವುದು. ರಸ್ತೆ ಸುರಕ್ಷತಾ ಕ್ರಮವಾಗಿ ಸಾರ್ವಜನಿಕರಿಗೆ, ವೃದ್ದರು ಮಹಿಳೆಯರ ಹಾಗೂ ವಾಹನಗಳ ಸಂಚಾರಕ್ಕೆ ಆಡಚಣೆಯಾಗದಂತೆ ಸೂಚಿಸಿರುವ ಮಾರ್ಗಸೂಚಿಯಂತೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಅವರಿಗೂ ಬದುಕು ಕಟ್ಟಿ ಕೊಡುವ ದೆಸೆಯಲ್ಲಿ ಕ್ರಮ ಜರುಗಿಸಲು ವೆಂಡರ್ಸ್‌ ಜೋನ್ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ನಗರಸಭೆಯ ಪೌರಾಯುಕ್ತರು ಹಾಗೂ ಸಮಿತಿಯ ಹಳೆಯ ಸದಸ್ಯರನ್ನೇ ತಾತ್ಕಲಿಕವಾಗಿ ಪರಿಗಣಿಸಿ ಸಮಿತಿ ರಚಿಸಿದೆ. ಫುಟ್‌ಪಾತ್‌ ಒತ್ತುವರಿ ತೆರವಿಗೆ ಕ್ರಮನಗರದ ಮುಖ್ಯ ರಸ್ತೆಗಳಲ್ಲಿ ಅಂಗಡಿಗಳವರು ಪಾದಚಾರಿ ರಸ್ತೆಗಳನ್ನು ಅತಿಕ್ರಮಿಸಿ ಅಂಗಡಿಯ ಸಾಮಾನುಗಳನ್ನು ಇಟ್ಟು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರ ಸಂಚರಕ್ಕೆ ಆಡಚಣೆಯಾಗುತ್ತಿರುವ ದೂರುಗಳು ಬಂದಿದೆ. ಈ ಸಂಬಂಧವಾಗಿ ಈಗಾಗಲೇ ಒಂದೆರಡು ಬಾರಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಇದೇ ರೀತಿ ಮುಂದುವರೆದರೆ ಪಾದಚಾರಿ ರಸ್ತೆಯಲ್ಲಿಟ್ಟಿರುವ ವಸ್ತುಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಿ ವಶಕ್ಕೆ ಪಡೆಯಲಾಗುವುದು ಎಂದರು. ಈಗಾಗಲೇ ನಗರದಲ್ಲಿ ಸಾರ್ವಜನಿಕರು ತ್ಯಾಜ್ಯ ರಸ್ತೆ ಬದಿಗಳಲ್ಲಿ ಸುರಿಯದಂತೆ ಕ್ರಮ ಜರುಗಿಸಿರುವುದರಿಂದ ಬೀದಿ ನಾಯಿಗಳಿಗೆ ಸಿಗುತ್ತಿದ್ದ ಆಹಾರಕ್ಕೆ ಅಭಾವ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ನಾಯಿಗಳನ್ನು ಹಿಡಿದು ಶೆಡ್‌ನಲ್ಲಿ ಕೊಡಿ ಹಾಕಿ ಸಂತಾನ ಹರಣ ಚಿಕಿತ್ಸೆ ಮಾಡಿದ ನಂತರ ಅವುಗಳನ್ನು ಆಚೆಗೆ ಬಿಡಲಾಗುವುದು. ನಗರ ಹೊರವಲಯದಲ್ಲಿ ಶೆಡ್ ನಿರ್ಮಿಸಿ ನಂತರ ಕಾರ್ಯಚರಣೆಗೆ ಪರಿಣಿತರಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ ಎಂದರು.

ಮಹಿಳಾ ಸಮಾಜ ಜಾಗ ವಿವಾದ ತನಿಖೆ:

ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಗೆ ನೀಡಲಾಗಿರುವ ನಗರಸಭೆಯ ಜಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ನಗರ ಯೋಜನಾ ನಿರ್ದೇಶಕರನ್ನು ನೇಮಿಸಿದ್ದು ಕೆಲವು ಅಧಿಕಾರಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಕುರಿತು ನಗರ ಯೋಜನಾಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆಯ ಕಂದಾಯಾಧಿಕಾರಿ ವೇಣುಗೋಪಾಲ್ ನಾಯ್ಕ್, ನಗರಸಭಾ ಮಾಜಿ ಉಪಾಧ್ಯಕ್ಷ ಪ್ರವೀಣಗೌಡ, ಮಾಜಿ ಸದಸ್ಯ ರಾಕೇಶ್‌ಗೌಡ ಇದ್ದರು.