ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ರಾಜ್ಯ ಸರ್ಕಾರದ ಯೋಜನೆ ವಿರೋಧಿಸಿ ಚರ್ಚೆಗೆ ಮಂಗಳವಾರ ಸಂಜೆ ಪಟ್ಟಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ವಿವಿಧ ಹಂತದಲ್ಲಿ ಹೋರಾಟ ರೂಪಿಸುವ, ಜನಾಂದೋಲನವಾಗಿ ಬೆಳೆಸುವ ಅಭಿಪ್ರಾಯ ಕೇಳಿಬಂತು. ಇದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ೧೧ ಜನ ಪ್ರಮುಖರ ಮೇಲ್ವಿಚಾರಣಾ ಸಮಿತಿ ರಚಿಸಿ, ಮುಂದಿನ ಹಂತರ ಆಂದೋಲನದ ನೀಲನಕಾಶೆ ಸಿದ್ಧಪಡಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.ಸಭೆಯಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಂಚಾಲಕ ಅಖಿಲೇಶ್ ಚಿಪ್ಳಿ ಮಾತನಾಡಿ, ಪದೇಪದೇ ಶರಾವತಿ ನದಿ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ನದಿ ತಿರುವು ಹೆಸರಿನಲ್ಲಿ ಶರಾವತಿ ನದಿಯನ್ನು ಅಪಹರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸ ಬೇಕು. ಕೇವಲ ೧೩೫ ಕಿ.ಮೀ. ಹರಿಯುವ ಇಷ್ಟು ಚಿಕ್ಕ ನದಿಯ ಮೇಲೆ ಆಗಿರುವ ದೌರ್ಜನ್ಯ ಪ್ರಪಂಚದ ಬೇರೆ ಯಾವುದೇ ನದಿಯ ಮೇಲೂ ಆಗಿಲ್ಲ. ನದಿ ನೀರು ಸಮುದ್ರ ಸೇರುವುದು ಕಡಿಮೆಯಾದಲ್ಲಿ ೧೫ ಕಿ.ಮೀ.ವರೆಗೆ ಉಪ್ಪು ನೀರು ನುಗ್ಗುತ್ತದೆ. ಅಲ್ಲಿನ ಜೀವ ವೈವಿಧ್ಯವೇ ಹಾಳಾಗುತ್ತದೆ. ಹಲವು ತಜ್ಞರು ಶರಾವತಿ ನೀರು ತಿರುವು ಅವೈಜ್ಞಾನಿಕ ಎಂದು ಹೇಳಿದ್ದರೂ ಸರ್ಕಾರ ಮತ್ತದೇ ಕಾರ್ಯಕ್ರಮ ರೂಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೧೦೦ ರು. ಹೂಡಿಕೆ ಮಾಡಿ ೭೫ ರು. ದುಡಿಯುವ ಯೋಜನೆಯಿಂದ ಯಾರಿಗೆ ಲಾಭವಿದೆ ಎಂದು ಪ್ರಶ್ನಿಸಿದ ಅವರು, ಬಕಾಸುರನಂತಹ ಮಹಾನಗರದ ಅತಿ ಯಾಸೆ ಪೂರೈಸಲು ಹಲವು ಪರ್ಯಾಯವಿದ್ದರೂ ಮತ್ತದೇ ಅವೈಜ್ಞಾನಿಕ ಯೋಜನೆಗೆ ಸರ್ಕಾರ ಮುಂದಾಗುತ್ತಿದೆ. ೨೦ ಸಾವಿರ ಕೋಟಿ ರು.ವೆಚ್ಚ ಮಾಡಿ ಇಷ್ಟು ದೂರದಿಂದ ನೀರು ಕೊಂಡೊಯ್ದು ಏನು ಸಾಧಿಸುತ್ತಾರೆ. ಅಲ್ಲಿಯೇ ಇರುವ ನೀರಿನ ಸದ್ಬಳಕೆ ಮಾಡಿಕೊಂಡರೆ ಸಾಕು. ಅದಕ್ಕೆ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ತಂತ್ರಜ್ಞಾನಗಳಿದ್ದರೂ ಆಳುವವರು ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಇನ್ನೊಂದು ಪರಿಸರ ವಿರೋಧಿ ಕೃತ್ಯಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಸರಿನಲ್ಲಿ ಶರಾವತಿ ನದಿ ನೀರನ್ನೆ ನಂಬಿಕೊಂಡಿರುವ ಹೊನ್ನಾವರ ಭಾಗದ ಸಣ್ಣ ಹಿಡುವಳಿದಾರರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಗೇರುಸೊಪ್ಪದಲ್ಲಿ ಬಿದ್ದ ನೀರನ್ನು ಮತ್ತೆ ಮೇಲೆತ್ತಿ, ವಿದ್ಯುತ್ ಉತ್ಪಾದಿಸುವ ಪಂಪ್ಡ್ ಸ್ಟೋರೇಜ್ ಹಾಸ್ಯಾಸ್ಪದ. ಎರಡೂ ಯೋಜನೆಯನ್ನು ಸರ್ಕಾರ ಕೈಬಿಡದೆ ಹೋದಲ್ಲಿ ಮಲೆನಾಡು ಮತ್ತು ಕರಾವಳಿ ಜನರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ವಿದ್ಯುತ್ ನೀತಿ ವಿಶ್ಲೇಷಕ ಶಂಕರ ಶರ್ಮ, ನಾರಾಯಣ ಮೂರ್ತಿ ಕಾನುಗೋಡು, ಎಸ್.ಎಲ್.ಎನ್.ಸ್ವಾಮಿ, ನಮಿಟೋ ಕಾಮದಾರ್ ಮಾತನಾಡಿದರು. ರಂಗಕರ್ಮಿ ಚಿದಂಬರರಾವ್ ಜಂಬೆ, ಅ.ರಾ.ಲಂಬೋಧರ್, ಕಲಸೆ ಚಂದ್ರಪ್ಪ, ಸಂತೋಷ್ ಸದ್ಗುರು, ಡಿ.ದಿನೇಶ್, ಗಣೇಶ್ ಪ್ರಸಾದ್, ಸರಾ ಸಂಸ್ಥೆಯ ಧನುಷ್ ಇನ್ನಿತರರಿದ್ದರು.ಪಕ್ಷಾತೀತವಾಗಿ ಹೋರಾಟ: ಹಾಲಪ್ಪಮಾಜಿ ಸಚಿವ ಹೆಚ್.ಹಾಲಪ್ಪ ಮಾತನಾಡಿ, ೨೦೧೯ರಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. ಈಗ ಮತ್ತೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ೭೩ ಲಕ್ಷ ರು. ವೆಚ್ಚದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಸರ್ವೆ ಮಾಡಲು ಆದೇಶ ನೀಡಿದೆ. ಪಕ್ಷಾತೀತವಾಗಿ ಹೋರಾಟ ಮಾಡುವ ಮೂಲಕ ಯೋಜನೆ ಕೈಬಿಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡಿ ಯೋಜನೆ ಕೈಬಿಡು ವಂತೆ ಒತ್ತಾಯಿಸುವ ಜೊತೆಗೆ ಜನಾಂದೋಲನ ರೂಪಿಸಿ ಸರ್ಕಾರದ ಯೋಜನೆಯನ್ನು ವಿರೋಧಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.