ರಾಜ್ಯದ ಪ್ರಮುಖ 13 ಪ್ರವಾಸಿ ತಾಣಗಳ ಉದ್ದೇಶಿತ ರೋಪ್‌ವೇಗಳು ಹಲವು ವರ್ಷಗಳಿಂದ ಪ್ರಸ್ತಾಪದ ಹಂತದಲ್ಲೇ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂಜನಾದ್ರಿ ಬೆಟ್ಟ, ಮುಳ್ಳಯ್ಯನಗರಿ ಶಿಖರ, ಮಧುಗಿರಿ ಬೆಟ್ಟ, ಗೋಕಾಕ್ ಜಲಪಾತ ಸೇರಿ ರಾಜ್ಯದ ಪ್ರಮುಖ 13 ಪ್ರವಾಸಿ ತಾಣಗಳ ಉದ್ದೇಶಿತ ರೋಪ್‌ವೇಗಳು ಹಲವು ವರ್ಷಗಳಿಂದ ಪ್ರಸ್ತಾಪದ ಹಂತದಲ್ಲೇ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡಿದ್ದಾರೆ.ನಗರದಲ್ಲಿ ಸೋಮವಾರ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಉದ್ದೇಶಿತ ರೋಪ್‌ವೇ ಯೋಜನೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಸಚಿವರು, 13 ರೋಪ್‌ವೇಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿ ಎಷ್ಟು ವರ್ಷಗಳಾಯಿತು. ಇನ್ನೂ ಅವು ಪ್ರಸ್ತಾಪದ ಹಂತದಲ್ಲೇ ಇವೆ ಎಂದರೆ ಅಭಿವೃದ್ಧಿ ಹೇಗಾಗುತ್ತದೆ. ರೋಪ್‌ವೇ ಯೋಜನೆಗಳು ಕೇವಲ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗಿಲ್ಲ. ಇವು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಉತ್ತೇಜಿಸುವುದರ ಜೊತೆಗೆ, ದುರ್ಗಮ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ಕಲ್ಪಿಸಿ, ಸ್ಥಳೀಯ ಆರ್ಥಿಕತೆ, ಉದ್ಯೋಗ ಸೃಷ್ಟಿ ಹಾಗೂ ಪ್ರವಾಸೋದ್ಯಮ ಹೂಡಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿಡಲಿವೆ. ಹಾಗಾಗಿ ಕೂಡಲೇ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಿ. ಯೋಜನೆಗಳಿಗೆ ಟೆಂಡರ್ ಆಹ್ವಾನಿಸುವ ಮುನ್ನವೇ ಅರಣ್ಯ, ಪರಿಸರ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅನುಮತಿ ಪಡೆಯುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
8 ಯೋಜನೆಗಳ ವರದಿ ಪೂರ್ಣ:ರಾಜ್ಯದ 13 ರೋಪ್‌ವೇ ಯೋಜನೆಗಳಿಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ರಿಟ್ಸ್ ಸಂಸ್ಥೆಗೆ ವಹಿಸಲಾಗಿದ್ದು, ಈಗಾಗಲೇ 8 ಯೋಜನೆಗಳ ವರದಿಗಳು ಪೂರ್ಣಗೊಂಡಿವೆ. ಉಳಿದವುಗಳ ವರದಿಗಳನ್ನು ಆದ್ಯತೆಯ ಮೇರೆಗೆ ನೀಡಬೇಕು. ಮುಳ್ಳಯ್ಯನಗಿರಿ ರೋಪ್‌ವೇ ಯೋಜನೆಗೆ ಅನುಮತಿಗಳ ಕೊರತೆಯಿಂದ ವರದಿಗೆ ವಿಳಂಬವಾಗುತ್ತಿದ್ದು, ರಿಟ್ಸ್ ಸಂಸ್ಥೆಗೆ ತಕ್ಷಣವೇ ಅಗತ್ಯ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರಲ್ಲದೆ, ಒಂದು ತಿಂಗಳೊಳಗೆ ವರದಿ ಸಲ್ಲಿಸಲು ನಿರ್ದೇಶಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತ, ಯಾದಗಿರಿ ಜಿಲ್ಲೆಯ ಮೈಲಾರ ಲಿಂಗೇಶ್ವರ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ದೇವಸ್ಥಾನದ ರೋಪ್‌ವೇ ಯೋಜನೆಗಳಿಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗಳು ಈಗಾಗಲೇ ಸಿದ್ಧಗೊಂಡಿದ್ದು, ಗೋಕಾಕ್ ರೋಪ್‌ವೇ ಯೋಜನೆಗೆ ಹಣಕಾಸು ಇಲಾಖೆಯ ಅನುಮತಿಯೂ ದೊರೆತಿದೆ. ಈ ಯೋಜನೆಯನ್ನು ಮುಂದಿನ ಸಚಿವ ಸಂಪುಟ ಸಭೆಯ ಅನುಮೋದನೆಗೆ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದರು.ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ। ಕೆ.ವಿ.ತ್ರಿಲೋಕ್ ಚಂದ್ರ, ಆಯುಕ್ತ ಡಾ। ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳು ಉಪಸ್ಥಿತರಿದ್ದರು.
13 ಪ್ರಸ್ತಾಪಿತ ರೋಪ್‌ವೇಗಳು ಎಲ್ಲೆಲ್ಲಿ?:ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾಬೆಟ್ಟ, ಕೊಡಗು ಜಿಲ್ಲೆಯ ಮಲ್ಲಹಳ್ಳಿ ಜಲಪಾತ, ಬಳ್ಳಾರಿ ಕೋಟೆ, ಧಾರವಾಡ ಜಿಲ್ಲೆಯ ನೃಪತುಂಗ ಬೆಟ್ಟ, ಯಾದಗಿರಿ ಜಿಲ್ಲೆ ಮೈಲಾರ ಲಿಂಗೇಶ್ವರ ದೇವಸ್ಥಾನ, ಯಾದಗಿರಿ ಕೋಟೆ, ಗದಗ ಜಿಲ್ಲೆಯ ಹೊಲಾಳಮ್ಮ ದೇವಸ್ಥಾನ, ಕಾಲಕಾಳೇಶ್ವರ ದೇವಸ್ಥಾನ, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನ, ಗೋಕಾಕ ಜಲಪಾತ, ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ದೇವಸ್ಥಾನ, ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಶಿಖರ.