ಬರಗಾಲ ಎದುರಿಸುವಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲ

| Published : Oct 29 2023, 01:00 AM IST

ಬರಗಾಲ ಎದುರಿಸುವಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಮತ್ತು ಹಿಂಗಾರು ಮಳೆಯ ಸಂಪೂರ್ಣ ವಿಫಲತೆಯಿಂದಾಗಿ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿದ್ದು, ರೈತರ ಸಮಸ್ಯೆಗಳು ಮತ್ತು ಹಿಂದೆಂದೂ ಕಾಣ ಬರಗಾಲ ಉಲ್ಬಣಿಸಿದ್ದು, ಇದನ್ನು ನಿರ್ವಹಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದನ್ನು ಖಂಡಿಸಿ ರೈತ ಸಂಘ ನ. 27ರಿಂದ ಮೂರು ದಿನಗಳ ಕಾಲ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದೆ.

ಗದಗ: ಮುಂಗಾರು ಮತ್ತು ಹಿಂಗಾರು ಮಳೆಯ ಸಂಪೂರ್ಣ ವಿಫಲತೆಯಿಂದಾಗಿ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿದ್ದು, ರೈತರ ಸಮಸ್ಯೆಗಳು ಮತ್ತು ಹಿಂದೆಂದೂ ಕಾಣ ಬರಗಾಲ ಉಲ್ಬಣಿಸಿದ್ದು, ಇದನ್ನು ನಿರ್ವಹಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದನ್ನು ಖಂಡಿಸಿ ನ. 27ರಿಂದ ಮೂರು ದಿನಗಳ ಕಾಲ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಪಾಟೀಲ ಹೇಳಿದರು.

ಅ‍ವರು ಶನಿವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಬಹಳಷ್ಟು ಹೇಳುತ್ತಾರೆ, ವಾಸ್ತವದಲ್ಲಿ ಅದು ಸಾಕಾರವಾಗಿಲ್ಲ. ಈ ಯೋಜನೆಯಲ್ಲಿ ರಾಯಚೂರು ಮತ್ತು ಗದಗ ಜಿಲ್ಲೆಯಲ್ಲಿ ಬಹು ದೊಡ್ಡ ಹಗರಣವೇ ನಡೆದಿದೆ. ವಿಮಾ, ಕೃಷಿ ಮತ್ತು ಕಂದಾಯ ಅಧಿಕಾರಿಗಳ ಖಾತೆಗೆ ಹಣ ಜಮೆ ಆಗಿದ್ದು, ನೈಜ ರೈತರಿಗೆ ಇದರ ಲಾಭ ಸಿಕ್ಕಿಲ್ಲ. ಈ ವಿಷಯವಾಗಿ ಕೃಷಿ ಸಚಿವರಿಗೆ ಮನವಿ ಮಾಡಿದರೂ ಅವರು ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದು ಹಲವು ರೀತಿಯ ಸಂಶಯಕ್ಕೆ ಕಾರಣವಾಗಿದೆ ಎಂದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಬರ ಹಿನ್ನೆಲೆ ರೈತರ ಸಾಲ ವಸೂಲಿಯನ್ನು ಸರ್ಕಾರ ತಡೆ ಹಿಡಿಯಬೇಕು. ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದ ಕಾರಣ ಬೃಹತ್ ನೀರಾವರಿ ಯೋಜನೆ ಬದಲಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಸರ್ಕಾರ ಜಾರಿ ತರಬೇಕು ಮತ್ತು ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಭೂ ಸುಧಾರಣೆ ಕಾಯ್ದೆ ಹಿಂಪಡೆಯಬೇಕು ಎಂದ ಅವರು ಹಲವಾರು ರೈತ ಬೇಡಿಕೆಗಳು ಮತ್ತು ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಜುಳಾ ಅಕ್ಕಿ, ಶಿವಾನಂದ ಇಟಗಿ, ಚಂದ್ರಕಾಂತ ಉಳ್ಳಗಾಡ್ಡಿ, ಮಾದೇಗೌಡ ಪಾಟೀಲ, ಮುತ್ತಣ್ಣ ಚೌಡರಡ್ಡಿ ಸೇರಿದಂತೆ ಜಿಲ್ಲೆಯ ವಿವಿಧ ರೈತ ಮುಖಂಡರು ಹಾಜರಿದ್ದರು. ರಾಜ್ಯದಲ್ಲಿ ಕೇವಲ ಅಕ್ಕಿ ವಿತರಣೆ ಮಾಡುವುದರಿಂದ ಸಾರ್ವಜನಿಕರಿಗೆ ಪ್ರೋಟೀನ್ ಯುಕ್ತ ಆಹಾರದ ಕೊರತೆಯಾಗುತ್ತಿದೆ. ಅದಕ್ಕಾಗಿ ಅಕ್ಕಿ ಬದಲಾಗಿ, ರಾಗಿ, ಜೋಳ, ತೊಗರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ರೈತರಿಂದ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ನೀಡಬೇಕು ಎಂದು ವಿವಿಧ ರೈತ ಮುಖಂಡರು ಒತ್ತಾಯಿಸಿದರು.