ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಳ್ಳಬೇಕು

| Published : Mar 29 2024, 12:45 AM IST

ಸಾರಾಂಶ

ಮಕ್ಕಳಿಗೆ ಕೈತುತ್ತು ನೀಡಿ ದೇಶಿಯ ಸಂಸ್ಕೃತಿ ಕಲಿಸಿಕೊಟ್ಟರೆ ಮಕ್ಕಳು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯುತ್ತಾರೆ

ಕನ್ನಡ ಪ್ರಭ ವಾರ್ತೆ ಮುಧೋಳ

ಸಮಾಜದ ಒಳಿತಿಗಾಗಿ, ನಾಡಿನ ಹಿತಕ್ಕಾಗಿ, ಹೆತ್ತವರಿಗೆ ಆಸರೆಯಾಗಿ ನಿಲ್ಲುವ ವಿದ್ಯಾರ್ಥಿಗಳು ಈ ದೇಶದ ಶಕ್ತಿ. ಅಂತಹ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣೆಗೆಗೆ ಶ್ರಮಿಸುತ್ತಿರುವ ತ್ರಿವೇಣಿ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಬುಧವಾರ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡಿಗೆ, ಮಾತೃ ವಂದನಾ ಕಾರ್ಯಕ್ರಮದ ನಿಮಿತ್ತ ನಡೆದ ಅಮ್ಮನ ಕೈತುತ್ತು- 2024 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿಸ್ತು, ಸಮರ್ಪಣಾ ಗುಣ ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜ ಪ್ರೀತಿಸುವ ವ್ಯಕ್ತಿಗಳಾಗಬೇಕು. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯವಾಗಿದೆ. ಮಕ್ಕಳಿಗೆ ಕೈತುತ್ತು ನೀಡಿ ದೇಶಿಯ ಸಂಸ್ಕೃತಿ ಕಲಿಸಿಕೊಟ್ಟರೆ ಮಕ್ಕಳು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ನುಡಿದರು.

ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಮಕ್ಕಳಿಗೆ ಕೇವಲ ಅಂಕಗಳಿಸಲು ಮಾತ್ರ ಶಿಕ್ಷಣ ನೀಡಬಾರದು. ಅದರ ಜೊತೆಗೆ ನೈತಿಕತೆ, ಸಂಸ್ಕಾರ ಕಲಿಸಬೇಕು. ಅದೇ ಉದ್ದೇಶದಿಂದ ಪ್ರತಿ ವರ್ಷ ಅಮ್ಮನ ಕೈತುತ್ತು ನೆನಪಿಸಲು ಅಮ್ಮನ ಕೈತುತ್ತು, ತಾಯಂದಿರ ಪಾದಪೂಜೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ನೂತನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಶೃತಿ ತೇಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಬಹುದು ಎನ್ನಲು ನಾನೇ ಉದಾಹರಣೆ. ನಿರಂತರ ಓದು ನಮ್ಮ ನೈತಿಕ ಬಲ ಹೆಚ್ಚಿಸುತ್ತದೆ. ಸಾಧನೆಗೆ ರಹದಾರಿಯಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಶ್ರೀ ಅಡವಿಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಚಿದಾನಂದ ಪಾಟೀಲ, ಸಮಾಜ ಸೇವಕ ಪ್ರಭು ಅವಟಿ, ಕಾನಿಪ ಸಂಘದ ಅಧ್ಯಕ್ಷ ಬಿ. ರತ್ನಾಕರಶೆಟ್ಟಿ, ಆಡಳಿತಾಧಿಕಾರಿ ಮಲ್ಲುಕಳ್ಳೆನ್ನವರ, ಮುಖ್ಯೋಪಾದ್ಯಾಯ ವೆಂಕಟೇಶ ಗುಡೆಪ್ಪನವರ ಇದ್ದರು.

ವರ್ಷಾ ನರೋಜಿ, ಭಾಗ್ಯಾ ಗಣಾಚಾರಿ ಸ್ವಾಗತಿಸಿದರು. ಪಲ್ಲವಿ ಬಸವನಾಳ, ರಶ್ಮಿ ಜಾಧವ ನಿರೂಪಿಸಿದರು. ಸಿಂಜನಾ ವಾಘ್ಮೋರೆ, ತನುಶ್ರೀ ಗಾಯಕವಾಡ ಪ್ರಶಸ್ತಿ ವಿತರಿಸಿದರು. ಶ್ರೀರಕ್ಷಾ ಗುಲಗಾಲಜಂಬಗಿ, ಆಶ್ವಿನಿ ಗಣಿ ವಂದಿಸಿದರು.

ಈ ವೇಳೆ ನ್ಯಾಯಾಧೀಶೆ ಶೃತಿ ತೇಲಿ, ಶಾಲೆ ಆಯಾ ಹಾಗೂ ವಾಹನ ಚಾಲಕ, ಶೇ.100 ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.