ಭಯ, ಹಿಂಜರಿಕೆ ವಿದ್ಯಾರ್ಥಿಗಳು ಬಿಡಬೇಕು

| Published : Jan 15 2024, 01:45 AM IST

ಸಾರಾಂಶ

ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಅಂಜಿಕೆ-ಭಯ, ಹಿಂಜರಿಕೆ, ಆಂತರಿಕ ದುಗುಡ, ಕೀಳರಿಮೆ ಬೇಡ ತೊರೆಯಬೇಕು. ನನಗೆ ಸಾಧ್ಯವಿಲ್ಲ, ನನ್ನಿಂದ ಅಸಾಧ್ಯ, ಏನಾಗುವುದೋ ಏನೋ ಎಂಬಂತಹ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬಾರದು.

ಕನ್ನಡಪ್ರಭ ವಾರ್ತೆ ವಿಜಯಪುರ ಅಂಜಿಕೆ, ಹಿಂಜರಿಕೆಯಿಂದ ವಿದ್ಯಾರ್ಥಿಗಳು ದೂರ ಇರಬೇಕು. ಇದು ಸಾಧನೆಯ ಸೂತ್ರ ಎಂದು ಶೇಗುಣಸಿ ವಿರಕ್ತಮಠದ ಪೀಠಾಧಿಪತಿ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ವೈಭವ ಹಾಗೂ ಸಮಾಜ ಸೇವೆ ಮಹತ್ವ ಕುರಿತು ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀವರ್ಚನ ನೀಡಿದ ಅವರು, ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಅಂಜಿಕೆ-ಭಯ, ಹಿಂಜರಿಕೆ, ಆಂತರಿಕ ದುಗುಡ, ಕೀಳರಿಮೆ ಬೇಡ ತೊರೆಯಬೇಕು. ನನಗೆ ಸಾಧ್ಯವಿಲ್ಲ, ನನ್ನಿಂದ ಅಸಾಧ್ಯ, ಏನಾಗುವುದೋ ಏನೋ ಎಂಬಂತಹ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬಾರದು ಎಂದು ಹೇಳಿದರು.

ಋಣ್ಮಾತ್ಮಕ ಚಿಂತನೆಗಳಿಂದ ಹೊರಬರಬೇಕು. ನಿಷ್ಠೆ, ಒಳ್ಳೆಯ ಆಲೋಚನೆ, ಆತ್ಮಸ್ಥೈರ್ಯ, ದೃಢನಿಶ್ಚಯ, ಸತತ ಪ್ರಯತ್ನ ಮತ್ತು ಕ್ರಿಯಾಶೀಲತೆಗಳು ನಮ್ಮ ಕಾರ್ಯಸಾಧನೆಗೆ ಉತ್ತಮ ದಿಕ್ಸೂಚಿಯಾಗಬಲ್ಲವು. ನಮ್ಮಲ್ಲಿರುವ ಕೆಲಸದ ಬಗೆಗಿನ ಜ್ಞಾನ, ಪ್ರತಿಭೆ, ಶಕ್ತಿ-ಸಾಮರ್ಥ್ಯ, ಯುಕ್ತತೆ, ಪ್ರಾಯೋಗಿಕ ಜ್ಞಾನ, ಸಮಸ್ಯೆಯನ್ನು ಸುಲಭವಾಗಿ ಎದುರಿಸಬಲ್ಲ ಜಾಣ್ಮೆ ಮತ್ತು ವೈಚಾರಿಕ ಮನೋಭಾವನೆಗಳೇ ನಮಗೆ ಹಿಡಿದ ಕೆಲಸ-ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಹೇಳಿದರು.ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಅಂಕ, ಪದವಿ, ಉದ್ಯೋಗ ಅಥವಾ ನೌಕರಿಗಾಗಿ ಪಡೆಯದೇ, ಪಡೆದ ಜ್ಞಾನದಿಂದ ಇಡೀ ಸಮುದಾಯಕ್ಕೆ ಏನನ್ನಾದರೂ ಕೊಡುಗೆ ನೀಡುತ್ತ, ಸಂಸ್ಕೃತಿ-ಸಂಸ್ಕಾರ, ಮೌಲ್ವಿಕ, ನೈತಿಕ, ವೈಚಾರಿಕ ಮತ್ತು ಜೀವನಾದರ್ಶಗಳನ್ನು ಅಳವಡಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯಾರಿಯುತ ಪ್ರಜೆಗಳಾಗಬೇಕು ಎಂದರು.

ಅಧ್ಯಕ್ಷತೆ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ವಹಿಸಿದ್ದರು. ಪಿ.ಹೆಚ್.ಡಿ ಪಡೆದ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎನ್.ಶಾಡದಳ್ಳಿ ಹಾಗೂ ಭೌತಶಾಸ್ತ್ರ ವಿಭಾಗದ ಡಾ. ಆನಂದ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ಪ್ರೊ. ಎಂ.ಎಸ್.ಖೊದ್ನಾಪೂರ, ಪ್ರೊ.ಸಂಗಮೇಶ ಗುರವ, ಡಾ.ಬಿ.ಎನ್.ಶಾಡದಳ್ಳಿ, ಪ್ರೊ.ಅಲಿಯಾ ಮುಲ್ಲಾ, ಪ್ರೊ.ಸುನೀಲ ತೋಂಟಾಪೂರ, ಪ್ರೊ.ಶಿವಾನಂದ ಜಮಾದಾರ, ಡಾ.ಚಂದ್ರಕಾಂತ ಬಿ., ಡಾ.ಪ್ರಕಾಶ ಹಾವೇರಿಪೇಟ, ಡಾ.ಮಮತಾ ಬನ್ನೂರ, ಡಾ. ಪಿ.ಎಂ.ಪರುಗೊಂಡ, ರೇಣುಕಾ ಅಗಸರ ಮುಂತಾದವರು ಇದ್ದರು.