ಜಿಲ್ಲಾದ್ಯಂತ ದೀಪಾವಳಿ ಹಬ್ಬ ಸಂಭ್ರಮ: ಹಣತೆಗಳ ಮಿಣುಕು, ಪಟಾಕಿಗಳ ಬೆಳಕು

| Published : Nov 02 2024, 01:16 AM IST

ಜಿಲ್ಲಾದ್ಯಂತ ದೀಪಾವಳಿ ಹಬ್ಬ ಸಂಭ್ರಮ: ಹಣತೆಗಳ ಮಿಣುಕು, ಪಟಾಕಿಗಳ ಬೆಳಕು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮುಗಿಲು ಮುಟ್ಟಿದ್ದು, ಜನರು ಬಂಧು-ಮಿತ್ರರೊಂದಿಗೆ ಹಬ್ಬದ ಖುಷಿಯಲ್ಲಿದ್ದಾರೆ. ಶುಕ್ರವಾರ ಕೂಡ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಮುಂದುವರಿದಿತ್ತು. ಮಾರುಕಟ್ಟೆಗೆ ಹೂವು ಬಹಳ ಬಂದ ಕಾರಣ ದರದಲ್ಲಿ ಸ್ವಲ್ಪ ಕಡಿಮೆಯಾಗಿತ್ತು.

- ಮನೆಗಳ ಮುಂದೆ ರಂಗುರಂಗಿನ ರಂಗವಲ್ಲಿ ಸೊಬಗು - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮುಗಿಲು ಮುಟ್ಟಿದ್ದು, ಜನರು ಬಂಧು-ಮಿತ್ರರೊಂದಿಗೆ ಹಬ್ಬದ ಖುಷಿಯಲ್ಲಿದ್ದಾರೆ. ಶುಕ್ರವಾರ ಕೂಡ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಮುಂದುವರಿದಿತ್ತು. ಮಾರುಕಟ್ಟೆಗೆ ಹೂವು ಬಹಳ ಬಂದ ಕಾರಣ ದರದಲ್ಲಿ ಸ್ವಲ್ಪ ಕಡಿಮೆಯಾಗಿತ್ತು.

ದೀಪಾವಳಿ ಅಮವಾಸ್ಯೆ ದಿನದಂದು ಎಲ್ಲರ ಮನೆಯಂಗಳದಲ್ಲಿ ರಂಗವಲ್ಲಿಯ ಚಿತ್ತಾರ ಮೂಡಿತ್ತು. ಮನೆ ಬಾಗಿಲನ್ನು ಹೂವು, ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ವ್ಯಾಪಾರಿಗಳು ತಮ್ಮ ಅಂಗಡಿ- ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಇದೇ ಶುಭ ದಿನದಂದು ಹೊಸ ವ್ಯಾಪಾರ ಶುರುಮಾಡಲು ಕೆಲವರು ಅಂಗಡಿ ಪೂಜೆ ಹಮ್ಮಿಕೊಂಡಿದ್ದರು.

ನಗರದ ಬಟ್ಟೆಯಂಗಡಿಗಳಲ್ಲಿ ಹೊಸ ಬಟ್ಟೆ ಕೊಳ್ಳುವವರು ಮುಗಿ ಬಿದ್ದಿದ್ದರಿಂದ ವ್ಯಾಪಾರ ಜೋರಾಗಿತ್ತು. ಹಬ್ಬಕ್ಕೆ ಸ್ವೀಟ್ ಬಾಕ್ಸ್ ಕೊಡುವ ಪದ್ಧತಿ ಇರುವುದರಿಂದ ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಜನದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು. ದೀಪಾವಳಿ ಎರಡನೇ ದಿನವೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿ ನಡೆಯಿತು.

ಪಟಾಕಿ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ನಿನ್ನೆಗಿಂತಲೂ ಅಧಿಕವಾಗಿತ್ತು. ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಲು ಹೈಸ್ಕೂಲ್ ಮೈದಾನದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಜನಜಾತ್ರೆ ಏರ್ಪಟ್ಟಿತ್ತು. ಜನರು ಆಕಾಶಬುಟ್ಟಿ, ಪಟಾಕಿ, ಹಣತೆ ಖರೀದಿಸುವಲ್ಲಿ ಮಗ್ನರಾಗಿದ್ದರು.

ಶುಕ್ರವಾರ ಸಂಜೆ ಹೊತ್ತು ಮುಳುಗುತ್ತಿದ್ದಂತೆ ಪಟಾಕಿಗಳ ಅಬ್ಬರ ಹೆಚ್ಚಾಗಿತ್ತು. ನಿರಂತರ ಕೇಳಿಬರುತ್ತಿದ್ದ ಪಟಾಕಿ ಸದ್ದು ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಎದುರು ಹಣತೆ ಹೆಚ್ಚಿದ್ದ ಹೆಂಗಳೆಯರು ಲಕ್ಷ್ಮಿ ಪೂಜೆ ನೆರವೇರಿಸಿ ದೇವಿಯ ಆಶೀರ್ವಾದ ಬೇಡಿದರು. ತಿಥಿ ವ್ಯತ್ಯಾಸದಿಂದ ಕೆಲವರು ಶನಿವಾರ ಲಕ್ಷ್ಮೀ ಪೂಜೆಗೆ ಸಿದ್ಧತೆ ನಡೆಸಿದ್ದರು. ಮೂರು ದಿನಗಳ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಮಕ್ಕಳು, ಹಿರಿಯರು, ಮಹಿಳೆಯರು ಮನೆಯವರೊಂದಿಗೆ ಇಂದು ವಿವಿಧ ರೀತಿಯ ಸಿಹಿಭೋಜನ ಸವಿದರು.

- - - (ಫೋಟೋ)