ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪರಿಶಿಷ್ಟರ ಹಣ ನುಂಗಿದ್ದಲ್ಲದೇ ಇದೀಗ ಹಾಲಿನ ಬೆಲೆ ಏರಿಸಿದರೂ ರೈತರಿಗೆ ನೀಡಬೇಕಾದ ಪ್ರೋತ್ಸಾಹ ಧನ ನೀಡದೇ ವಂಚಿಸಿರುವ ಈ ಲಜ್ಜೆಗೇಡಿ ಸರ್ಕಾರದ ಗ್ಯಾರಂಟಿಗಳಿಗೂ ವಾರಂಟಿ ಇಲ್ಲ, ಅದೇ ರೀತಿ ಜಾತಿ, ಧರ್ಮ,ಸಮುದಾಯಗಳನ್ನು ವಿಭಜಿಸಿ ರಾಜಕೀಯ ಮಾಡುವ ತಂತ್ರವಾಗಿ ಇವರು ನಡೆಸಿರುವ ಅವೈಜ್ಞಾನಿಕ ಜಾತಿ ಗಣತಿಯಿಂದ ಈ ಸರ್ಕಾರಕ್ಕೂ ಗ್ಯಾರಂಟಿ ಇಲ್ಲವಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.ನಗರದಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ನಗರದೇವತೆ ಕೋಲಾರಮ್ಮ ಹಾಗೂ ಸಾಯಿಬಾಬಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರು ನೀಡಿರುವ ಗ್ಯಾರಂಟಿಗಳಿಗೂ ವಾರೆಂಟಿ ಇಲ್ಲ, ಜಾತಿ ಗಣತಿಯಿಂದ ಸರ್ಕಾರ ಪತನದತ್ತ ಸಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.ಜನರ ರಕ್ತ ಹೀರುತ್ತಿರುವ ಸರ್ಕಾರ
ಕಾಂಗ್ರೆಸ್ ಸರ್ಕಾರದ ಹಲವಾರು ಸಚಿವರೇ ಈ ಅವೈಜ್ಞಾನಿಕ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಲಿನ ದರ, ಪ್ರಯಾಣದರ, ಮುದ್ರಾಂಕ ಶುಲ್ಕ ಏರಿಕೆ ಹೀಗೆ ಜನರ ರಕ್ತ ಹೀರುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಅದರ ಕಾರ್ಯಕರ್ತರು ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಅಡುಗೆ ಅನಿಲ್ ಸಿಲೆಂಡರ್ ದರ ಏರಿಕೆ ಮಾಡಲಾಗಿದೆ ಎಂದು ಬೊಬ್ಬೆ ಇಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.ಜಾತಿ ಗಣತಿ ಹೆಸರಿನಲ್ಲಿ ಧರ್ಮ,ಜಾತಿಗಳನ್ನು ವಿಭಜನೆ ಮಾಡುತ್ತಿದ್ದಾರೆ, ಹಿಂದೂಗಳಲ್ಲಿ ಜಾತಿ,ಒಳಜಾತಿಯ ಗಣತಿ ಲೆಕ್ಕಾಚಾರ ಮಾಡಲಾಗಿದ್ದು, ಬೇರೆ ಧರ್ಮದಲ್ಲಿನ ಜಾತಿಗಳನ್ನು ಏಕೆ ಗಣತಿಗೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿ, ಮುಸ್ಲಿಮರ ತುಷ್ಟೀಕರಣಕ್ಕಾಗಿ ಧರ್ಮಾಧಾರಿತ ಮೀಸಲಾಗಿ ನೀಡುವ ಮೂಲಕ ಸಂವಿಧಾನಕ್ಕೆ ದ್ರೋಹವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರ ದಿವಾಳಿ
ಈಗಾಗಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಗ್ಯಾರಂಟಿಗಳಿಗೆ ಹಣ ಸರಿದೂಗಿದಲು ಹೆಣಗಾಡುತ್ತಿದೆ. ಸಾರಿಗೆ ಸಂಸ್ಥೆಗೆ ಬಾಕಿ ಹಣ ನೀಡಲಾಗದೇ ಸಾರಿಗೆ ನೌಕರರಿಗೆ ಸಂಬಳಕ್ಕೂ ಪರದಾಟ ಅನುಭವಿಸುವಂತಾಗಿದೆ. ಯುವನಿಧಿ ಯೋಜನೆ ಯಾವ ಯುವಕರಿಗೆ ಸಿಕ್ಕಿದೆಯೇ ದೇವರಿಗೇ ಗೊತ್ತು, ಈ ಗ್ಯಾರೆಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆಗಳ ಜಿಲ್ಲಾ, ತಾಲೂಕು ಅಧ್ಯಕ್ಷರ ಪಟ್ಟ ನೀಡಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡುತ್ತಿದೆ ಎಂದರು.ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಲೋಟ ಕೊಟ್ಟು ಹಂಡೆ ಕಸಿಯುವಂತ ಯೋಜನೆಗಳ ಅಪರಾವತಾರವಾಗಿದೆ. ಹೆಂಡತಿಗೆ ಒಂದು ಕೈಯಲ್ಲಿ ಕೊಟ್ಟು ಗಂಡನ ಜೇಬಿಗೆ ಕತ್ತರಿ ಹಾಕುತ್ತಿವೆ ಎಂದು ಆರೋಪಿಸಿದರು.ಕಾನೂನು ಸುವ್ಯವಸ್ಥೆ ಅಧೋಗತಿ
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದೆ, ಕೊಲೆ,ಹಲ್ಲೆ ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದರೂ ಅವರನ್ನು ಬಂಧಿಸುವ ಪ್ರಯತ್ನವನ್ನೂ ಪೊಲೀಸರು ಮಾಡುತ್ತಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಕ್ರೋಶಗೊಂಡಿರುವ ಜನರನ್ನು ದಿಕ್ಕು ತಪ್ಪಿಸಲು ಜಾತಿ ಗಣತಿ ಪ್ರಸ್ತಾಪ ಮಾಡಲಾಗಿದೆ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಪತನವಾಗಬಹುದು ಎಂದು ತಿಳಿಸಿದರು.ವಕ್ಪ್ ಮಸೂದೆಗಳಿಗೆ ತಿದ್ದು ಪಡಿ ತಂದಿರುವುದನ್ನು ಮುಸ್ಲಿಂ ಸಮುದಾಯಗಳು ಸ್ವಾಗತಿಸಿ ಹರ್ಷ ವ್ಯಕ್ತ ಪಡೆಸುತ್ತಿದ್ದರೆ ಕಾಂಗ್ರೆಸ್ ವಕ್ಫ್ ತಿದ್ದುಪಡಿ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿರುವುದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ,ನಗರಸಭಾ ಸದಸ್ಯ ಪ್ರವೀಣ್ ಗೌಡ, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್,ಸಾಮಾ ಅನಿಲ್‌ಬಾಬು,ಯುವ ಮೋರ್ಚಾ ಬಾಲಾಜಿ, ಮಂಜುನಾಥ್, ಮಹೇಶ್,ಸಿಂಡಿಕೇಟ್ ಸದಸ್ಯ ರವೀಶ್‌ಗೌಡ,ರಾಜು ಅಪ್ಪಿ, ರೋಣೂರು ಚಂದ್ರಶೇಖರ್,ಸತೀಶ್ ಮತ್ತಿತರರಿದ್ದರು.