ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದೆಲ್ಲೆಡೆ ಜಾತ್ರಾ ಸಂಭ್ರಮ ಮನೆಮಾಡಿದ್ದ ನಡುವೆ ಗ್ರಾಮದೇವತೆಗಳಾದ ಶ್ರೀ ಕರಿಯಮ್ಮ ಹಾಗೂ ಶ್ರೀ ಮಲ್ಲಿಗೆಮ್ಮ ದೇವಿಯವರ 57ನೇ ವರ್ಷದ ಮಹಾರಥೋತ್ಸವ ಗುರುವಾರ ಅದ್ಧೂರಿಯಾಗಿ ಜರು

ಭಕ್ತರ ಜಯಘೋಷ, ಮಂಗಳವಾದ್ಯಗಳ ನಾದ ಮತ್ತು ಧಾರ್ಮಿಕ ವಿಧಿವಿಧಾನಗಳ ನಡುವೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯರ ಕೃಪೆಗೆ ಪಾತ್ರರಾದರು. ಬೆಳಗ್ಗಿನಿಂದಲೇ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆಗಳು, ಅಲಂಕಾರ ಕಾರ್ಯಗಳು ಹಾಗೂ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದವು. ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಭವ್ಯ ರಥದ ಮೇಲೆ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನೆರವೇರಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು.ಜಾತ್ರಾ ಮಹೋತ್ಸವದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ, ಶ್ರೀ ಕರಿಯಮ್ಮ ಹಾಗೂ ಶ್ರೀ ಮಲ್ಲಿಗಮ್ಮ ದೇವಿಯರ ಮಹಾರಥವನ್ನು ಶ್ರೀ ದೂತರಾಯಸ್ವಾಮಿ ಮತ್ತು ಶ್ರೀ ಚೆಲುವರಾಯಸ್ವಾಮಿ ದೇವರ ಸಾನ್ನಿಧ್ಯದಲ್ಲಿ ಎಳೆಯಲು ಚಾಲನೆ ನೀಡಲಾಗುವುದು. ದೇವರೇ ಖುದ್ದಾಗಿ ರಥವನ್ನು ಎಳೆಯುತ್ತಿರುವ ಪ್ರತೀಕವಾಗಿ ಈ ಆಚರಣೆ ನಡೆದು ಬರುತ್ತಿದ್ದು, ಈ ಅಪೂರ್ವ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಾರೆ. ದೇವಿಯವರ ನಾಮಸ್ಮರಣೆ ಕೂಗುತ್ತ ಭಕ್ತರು ರಥವನ್ನು ಎಳೆಯುವ ದೃಶ್ಯ ವಿಶೇಷ ಭಕ್ತಿಭಾವಕ್ಕೆ ಸಾಕ್ಷಿಯಾಯಿತು. ಗ್ರಾಮ ದೇವತೆಯರ ರಥೋತ್ಸವದಲ್ಲಿ ಪಾಲ್ಗೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ನೂತನ ವಧು-ವರರು, ಹೊರ ಊರುಗಳಲ್ಲಿ ನೆಲೆಸಿರುವ ಹೆಣ್ಣುಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಬಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ರಥೋತ್ಸವದ ವೇಳೆ ಹಲವು ಭಕ್ತರು ಪಾನಕ, ಫಲಾಹಾರ ಹಾಗೂ ಪ್ರಸಾದ ವಿತರಣೆ ಮಾಡುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ವತಿಯಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ದೇವಸ್ಥಾನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.ಊರೊಳಗಿನ ಮಲ್ಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯಬದ್ಧ “ಮಣೆವು” ಕಾರ್ಯಕ್ರಮ ನೆರವೇರಲಿದ್ದು, ಇದರೊಂದಿಗೆ ಗ್ರಾಮದೇವತೆಗಳ 57ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ವೈಭವದ ತೆರೆ ಬೀಳಲಿದೆ.