ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಶಾಸಕರ ಹಿಂಬಾಲಕನಂತೆ ವರ್ತಿಸಿ ಅವರ ಮಾತಿಗೆ ಮನ್ನಣೆ ಕೊಟ್ಟು ಈಗ ತಿರುಗಿ ನಿಂತಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದೆ ಈಗ ಶಾಸಕರ ಕುಮ್ಮಕ್ಕಿನಿಂದ ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡುತ್ತಿರುವ ಅಶೋಕ್ ಅವರಿಗೆ ಅವಿಶ್ವಾಸ ನಿರ್ಣಯದಲ್ಲಿ ಸೋಲಾಗಲಿದೆ ಎಂದು ಮಾಜಿ ಸಚಿವ ಬಿ ಶಿವರಾಂ ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಅಧ್ಯಕ್ಷ ಆರ್ ಅಶೋಕ್ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಆರಂಭದಲ್ಲಿ ನನಗೆ ಐದು ತಿಂಗಳ ಅವಕಾಶ ಕೊಡಿ ಎಂದು ಬೇಡಿಕೊಂಡರು. ಇರಲಿ ನಮ್ಮ ಹುಡುಗ ಎಂದು ಅಧಿಕಾರ ಕೊಟ್ಟೆವು. ಆರು ತಿಂಗಳ ಬಳಿಕ ಒಡಂಬಡಿಕೆಯಂತೆ ರಾಜೀನಾಮೆ ಕೊಡು ಎಂದು ಕೇಳಿದಾಗ ಚನ್ನಕೇಶವ ಸ್ವಾಮಿ ಜಾತ್ರೆ ಮುಗಿದ ಮೇಲೆ ಕೊಡುತ್ತೇನೆ ಎಂದರು. ಇದಕ್ಕೂ ಒಪ್ಪಿಗೆ ನೀಡಿ ಅವಕಾಶ ಕೊಡಲಾಗಿತ್ತು. ನಂತರದಲ್ಲಿ ನಮಗೆ ಅವರು ಉಲ್ಟಾ ಹೊಡೆದರು. ಈಗಾಗಲೇ ಕೊಟ್ಟ ಮಾತಿನಂತೆ ಇನ್ನೂ ಮೂವರಿಗೆ ಅಧ್ಯಕ್ಷ ಪದವಿಯನ್ನು ನೀಡಲು ಒಪ್ಪಂದವಾಗಿದೆ ಎಂದರು.
ದಾಖಲೆ ಇದ್ದರೆ ಮಾತನಾಡಲಿ:ವರ್ಗಾವಣೆ ದಂಧೆಯಲ್ಲಿ ಹಣ ಮಾಡುತ್ತಿದ್ದೇನೆ ಎಂದು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಅಶೋಕ್ ದಾಖಲೆ ಇದ್ದರೆ ಮಾತನಾಡಲಿ, ನಾನು ಯಾವುದೇ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವುದನ್ನು ಸಾಕ್ಷಿ ಸಮೇತ ಹುಡುಕಿಕೊಟ್ಟರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ತಾವು ಕೇವಲ ನಿಸ್ವಾರ್ಥ ಗೆಳೆಯರ ಬಳಗದ ಗುಂಪಿನ ನಾಯಕ ಎಂದು ಅಪಾರ್ಥ ಕಲ್ಪಿಸಲಾಗುತ್ತಿದೆ. ನಿಶಾಂತ್ ಹಾಗೂ ಎಮ್ ಆರ್ ವೆಂಕಟೇಶ್ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈಗ ಸುದ್ದಿಗೋಷ್ಠಿಯಲ್ಲಿ ನಿಶಾಂತ್ ಅವರೇ ನಿಮ್ಮ ಮುಂದೆ ಕುಳಿತಿದ್ದಾರೆ ಅವರನ್ನೇ ಕೇಳಿನೋಡಿ ಎಂದರು.
ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲದೆ ಪುರಸಭೆ ಅಧ್ಯಕ್ಷರು ತಮ್ಮ ರಕ್ಷಣೆಗಾಗಿ ಬ್ಲಾಕ್ ಕ್ಯಾಟ್‌ಗಳನ್ನು ನೇಮಿಸಿಕೊಂಡು ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿ ಮನೆಗೋಡೆಗಳನ್ನು ಒಡೆಯುತ್ತಿದ್ದಾರೆ. ಪುರಸಭೆ ವಾಣಿಜ್ಯ ಮಳಿಗೆ ವಿಚಾರದಲ್ಲಿ ತಾವು ಮಾರ್ಗದರ್ಶನ ನೀಡಿರಬಹುದು, ಆದರೆ ಯಾವುದೇ ಅವ್ಯವಹಾರಕ್ಕೆ ಕುಮ್ಮಕ್ಕು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ತಾವು ಶಾಂತಕುಮಾರ್ ಹಾಗೂ ತೌಫಿಕ್ ಮಾತನ್ನು ಕೇಳುತ್ತೇನೆ ಎಂಬ ಆರೋಪವಿದೆ. ತಮಗೆ ಉತ್ತಮ ಮಾರ್ಗದರ್ಶನ ನೀಡಿದರೆ ಕೇಳುವುದರದಲ್ಲಿ ತಪ್ಪೇನಿದೆ. ಆದರೆ ತಾವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಲೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.ಪುರಸಭೆ ಅಧ್ಯಕ್ಷರ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ವಿಪ್ ಜಾರಿಯಾಗಿದ್ದು, ಶುಕ್ರವಾರ ನಡೆಯುವ ಅವಿಶ್ವಾಸ ನಿರ್ಣಯದಲ್ಲಿ ವಿಪ್ ಉಲ್ಲಂಘನೆಯಾದರೆ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಐದು ಜನ ಸದಸ್ಯರು ನಮ್ಮ ಪಕ್ಷದ ನಾಯಕರ ಹಾಗೂ ಸದಸ್ಯರ ಅಭಿಪ್ರಾಯ ಪಡೆಯದೇ ವಿರೋಧ ಪಕ್ಷದವರ ಮಾತನ್ನು ಕೇಳುತ್ತಿದ್ದು ಮುಂದಿನ ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಲಿದೆ ಎಂದರು.
ಮಲೆನಾಡು ಭಾಗದ ಗೆಂಡೆಹಳ್ಳಿ ಗ್ರಾಮದ ಸುತ್ತಮುತ್ತ ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರು ಸಂಕಷ್ಟದಲ್ಲಿರುವುದನ್ನು ಮನಗಂಡು ಕೆಪಿಸಿಟಿಎಲ್ ಕೇಂದ್ರ ಕಚೇರಿಯಿಂದ 20 ಎಂಎ ಸಾಮರ್ಥ್ಯವುಳ್ಳ ಟ್ರಾನ್ಸ್‌ಫಾರ್ಮರ್ ಅನ್ನು ಮಂಜೂರು ಮಾಡಿ ಎಂದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ, ಕೆಪಿಸಿಸಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ವಿಪ್ ಅನ್ನು ಸದಸ್ಯರ ಮನೆಬಾಗಿಲಿಗೆ ಅಂಟಿಸಲಾಗಿದೆ. ನಾಳೆ ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ಮೇಲೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ದ, ಇಲ್ಲಿ ಯಾವುದೇ ನಿಸ್ವಾರ್ಥ, ಸ್ವಾರ್ಥ ಬಳಗವಿಲ್ಲ. ಇಲ್ಲಿರುವುದು ಒಂದೇ ಕಾಂಗ್ರೆಸ್ ಪಕ್ಷ ಎಂದರು.
ಈ ಸಂದರ್ಭದಲ್ಲಿ ಹೋಬಳಿ ಘಟಕದ ಅಧ್ಯಕ್ಷ ಗೆಂಡೆಹಳ್ಳಿ ಶ್ರೀನಿವಾಸ್, ಉಪಾಧ್ಯಕ್ಷ ಮಲ್ಲೇಶ್, ಪುರಸಭೆ ಮಾಜಿ ಸದಸ್ಯ ಜುಬೆರ್ ಅಹಮದ್ ಇದ್ದರು.