ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದು, ನಿಸ್ವಾರ್ಥ ಸೇವೆಯೊಂದಿಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ಡಿವಿಜಿ ಸಭಾಂಗಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬರಲು ಸಂತಸವಾಗುತ್ತದೆ. ಒಗ್ಗಟ್ಟಿನಿಂದ ಇದ್ದೀರಿ, ರಾಜ್ಯ ಸಂಘವು ಸಹ ಜಿಲ್ಲಾ ಸಂಘಗಳನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತಾ ಸಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಂಘದ ಕಟ್ಟದಲ್ಲಿ ನೂತನವಾಗಿ ಡಿವಿಜಿ ಸಭಾಂಗಣ ನಿರ್ಮಾಣವಾಗಿದ್ದು ಇದರ ಸಂಪೂರ್ಣ ವೆಚ್ಚದ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಜಿಲ್ಲಾ ಸಂಘವು ಇತ್ತೀಚೆಗೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ, ಪತ್ರಕರ್ತರಿಗೆ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರ ಮಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಇದೇ ರೀತಿ ಸಂಘವು ಮುನ್ನಡೆಯಲಿ ಎಂದು ಶುಭಕೋರಿದರು.ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ಪತ್ರಕರ್ತರ ಸಂಘದ ಸಭಾಂಗಣಕ್ಕೆ ಡಿವಿ ಗುಂಡಪ್ಪ ಅವರ ಹೆಸರು ನಾಮಕರಣ ಮಾಡಿರುವುದು ಸಂತಸ ತಂದಿದೆ. ಗುಂಡಪ್ಪ ಅವರು ರಚಿಸಿರುವ "ಮಂಕುತಿಮ್ಮನ ಕಗ್ಗ " ಇಂದಿಗೂ ಎಲ್ಲರ ಜೀವನೋತ್ಸಾಹಕ್ಕೆ ಪ್ರೇರಣೆ ನೀಡುತ್ತದೆ. ಜಿಲ್ಲೆಯ ಪತ್ರಕರ್ತರು ಕ್ರಿಯಾಶೀಲವಾಗಿ ಉತ್ತಮ ಸ್ಪಂದನೆ, ವೈಚಾರಿಕತೆಗೆ ಪ್ರಶಸ್ತ್ಯ ನೀಡುತ್ತಿದ್ದು ಎಲ್ಲರೂ ತಂಡದಂತೆ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಸಂಘಕ್ಕೆ ಅಧ್ಯಕ್ಷರಾದ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದೇ ರೀತಿ ಸಂಘ ಒಗ್ಗಟ್ಟಿನಿಂದ ಮುನ್ನಡೆಯಲಿ ಎಂದು ಆಶಿಸಿದರು.ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಸಂಘವನ್ನು ಮೊದಲ ಬಾರಿಗೆ ಹುಟ್ಟುಹಾಕಿದ್ದು ಡಿ ವಿ ಗುಂಡಪ್ಪನವರು. ನಂತರ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಅವರು ಇದಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಮರು ನಾಮಕರಣ ಮಾಡಿದರು. ಕೇವಲ ಎಂಟು ಮಂದಿ ಸದಸ್ಯರಿಂದ ಪ್ರಾರಂಭವಾದ ಸಂಘವು ಇಂದು ರಾಜ್ಯದ್ಯಂತ ವಿಸ್ತರಿಸಿ 9500 ಸದಸ್ಯರನ್ನು ಹೊಂದಿದೆ ಎಂದರು. ರಾಜ್ಯ ಪತ್ರಕರ್ತರ ಸಂಘವು ತನ್ನದೇ ಆದ ಘನತೆಯನ್ನು ಉಳಿಸಿಕೊಂಡು ಬಂದಿದ್ದು ಅದರದೇ ಆದ ಪರಂಪರೆ ಇದೆ. ಇದೇ ರೀತಿ ಸಂಘದ ಘನತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಪ್ರತಿ ಚುನಾವಣೆ ಯಲ್ಲಿಯೂ ಸಹಮತದಿಂದ ಸಾಗೋಣ ಎಂದು ಸಲಹೆ ನೀಡಿದರು.ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್ ವೇಣು ಕುಮಾರ್ ಮಾತನಾಡಿ, ಹಿಂದೆ ಸಂಘವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಸಣ್ಣ ಕೊಠಡಿಯಲ್ಲಿ ಇತ್ತು. ಶಿವಾನಂದ ತಗಡೂರು ಅವರ ಅಧ್ಯಕ್ಷಾವಧಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಇದೇ ಕಟ್ಟಡದಲ್ಲಿ ಇಂದು ಡಿವಿಜಿ ಸಭಾಂಗಣವನ್ನು ಉದ್ಘಾಟಿಸಲಾಗುತ್ತಿದೆ ಎಂದರು.ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಆರ್ ಮಂಜುನಾಥ್, ರವಿ ನಾಗಲಗೂಡು, ಎಸ್ ಆರ್ ಪ್ರಸನ್ನ ಕುಮಾರ್, ಬಿ ಆರ್ ಉದಯ್ ಕುಮಾರ್, ಬಾಳ್ಳುಗೋಪಾಲ್ ಅವರು ಅತಿಥಿಗೃಹ, ಕ್ಷೇಮ ನಿಧಿ ಸೇರಿದಂತೆ ತಮ್ಮದೇ ಆದ ಕೊಡುಗೆಯನ್ನು ಸಂಘಕ್ಕೆ ನೀಡಿದ್ದಾರೆ ಎಂದರು.ಸಂಘದ ಯಾವುದೇ ಕಾರ್ಯಚಟುವಟಿಕೆಗೆ ಎಚ್ ಬಿ ಮದನ ಗೌಡರು ಸೇರಿದಂತೆ ಇತರೆ ಹಿರಿಯ ಪತ್ರಕರ್ತರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಪ್ರಗತಿ ಕಾಣುತ್ತಿದೆ. ನಮ್ಮ ಅವಧಿಯಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ, ಬೃಹತ್ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದಕ್ಕೆಲ್ಲಾ ಸಂಘದ ಪದಾಧಿ ಕಾರಿಗಳು ಹಿರಿಯ ಕಿರಿಯ ಪತ್ರಕರ್ತರ ಸಹಕಾರ ಮರೆಯುವಂತಿಲ್ಲ ಎಂದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ ಹರೀಶ್ ಗಣ್ಯರನ್ನು ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭದಲ್ಲಿ ವಾರ್ತಾಧಿಕಾರಿ ಮೀನಾಕ್ಷಮ್ಮ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್ .ಬಿ ಮದನಗೌಡ, ರಾಜ್ಯ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯ ರವಿನಾಕಲಗೂಡು, ಮಾಜಿ ಅಧ್ಯಕ್ಷರಾದ ಬಾಳ್ಳು ಗೋಪಾಲ್, ಲೀಲಾವತಿ, ಪ್ರಧಾನ ಕಾರ್ಯದರ್ಶಿ ಬಿ.ಸಿ ಶಶಿಧರ್, ಉಪಾಧ್ಯಕ್ಷರಾದ ಎಚ್. ಟಿ. ಮೋಹನ್ ಕುಮಾರ್, ಖಜಾಂಜಿ ಕುಮಾರ್, ಕಾರ್ಯದರ್ಶಿ ನಟರಾಜ್, ಸಿ.ಬಿ ಸಂತೋಷ್, ಪಿ.ಎ ಶ್ರೀನಿವಾಸ್, ಇಂಡಿಯಾನಾ ಆಸ್ಪತ್ರೆಯ ಡಾ. ನಿರೂಪ್ ಸೇರಿದಂತೆ ಇತರರು ಹಾಜರಿದ್ದರು.