ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳನ್ನು ಸರಿಸಾಟಿಯಾಗಿ ತಯಾರು ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಹೇಳಿದರು.ಪಟ್ಟಣದ ಅಚೀವರ್ಸ್ ಪ್ರಜ್ಞಾ ಕಾಲೇಜಿನಲ್ಲಿ ಡಿಜಿಟಲ್ ಕ್ಲಾಸ್‌ರೂಮನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಮುಂದಿನ ಭವಿಷ್ಯಕ್ಕಾಗಿ ಸಿದ್ಧಗೊಳಿಸುವುದು ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲ್ಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ತಂತ್ರಜ್ಞಾನದ ವಿಕಾಸದೊಂದಿಗೆ, ಶೈಕ್ಷಣಿಕ ಸಾಮರ್ಥ್ಯಗಳು ಪ್ರತಿದಿನ ಬೆಳೆಯುತ್ತಿವೆ ಮತ್ತು ಬದಲಾಗುತ್ತಿವೆ. ಈ ನಿಟ್ಟಿನಲ್ಲಿ ಅಚೀವರ್ಸ್ ಕಾಲೇಜು ವಿದ್ಯಾರ್ಥಿಗಳನ್ನು ಬದಲಾವಣೆಗೆ ತಕ್ಕಂತೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶಿಕ್ಷಣವನ್ನು ಪಡೆದರೆ, ಮುಂದಿನ ದಿನಗಳಲ್ಲಿ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದಾಗಿದೆ. ವಿದ್ಯಾರ್ಥಿಗಳು ಕಾಲೇಜು ಒದಗಿಸಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಝುಲ್ಫಿಕರ್ ಮಾತನಾಡಿ, ಜಗತ್ತು ವೇಗವಾಗಿ ಬದಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳು ಸರಿಸಾಟಿಯಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಮಕ್ಕಳಿಗೆ ಅತ್ಯಂತ ಸರಳವಾಗಿ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ತೊಡಗಿಸಿಕೊಳ್ಳಲು ಡಿಜಿಟಲ್ ಕ್ಲಾಸ್ ರೂಮ್ ಉಪಯುಕ್ತವಾಗಿದೆ. ಡಿಜಿಟಲ್ ಕ್ಲಾಸ್ ರೂಮ್ ಕಾಲೇಜಿನ ಪ್ರತಿಷ್ಠೆಗಾಗಿ ಸ್ಥಾಪಿಸಿಲ್ಲ. ಬದಲಿಗೆ ವಿದ್ಯಾರ್ಥಿಗಳು ಪಾಠದಲ್ಲಿ ಸುಲಭವಾಗಿ ತೊಡಗಿಕೊಳ್ಳಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಜ್ವಲ, ಉಪನ್ಯಾಸಕ ಮಲ್ಲಿಕಾರ್ಜುನ ಸ್ವಾಮಿ, ಕಾಲೇಜಿನ ಸಿಬ್ಬಂದಿಯಾದ ಪಾಪಣ್ಣ ಸೇರಿದಂತೆ ಇನ್ನಿತರರು ಇದ್ದರು.