ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಆಪರೇಷನ್ ಸಿಂದೂರ’ ಬೆಂಬಲಿಸಿ ಶನಿವಾರ ರಾಜ್ಯದ ಹಲವೆಡೆ ತಿರಂಗಾ ಯಾತ್ರೆ ನಡೆಸಲಾಯಿತು.ಕೋಲಾರದಲ್ಲಿ ‘ಭಾರತೀಯ ಸೇನೆಯೊಂದಿಗೆ ರಾಷ್ಟ್ರರಕ್ಷಣೆಯ ಸಂಕಲ್ಪ’ಕ್ಕಾಗಿ 1,500 ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ ಹಿಡಿದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ನಚಿಕೇತ ನಿಲಯದ ಆವರಣದಿಂದ ಆರಂಭಗೊಂಡ ಯಾತ್ರೆ ,ಟೇಕಲ್ ರಸ್ತೆಯ ಅಂಬೇಡ್ಕರ್ ಉದ್ಯಾನವನದಲ್ಲಿನ ಸೈನಿಕರ ಸ್ಮಾರಕ ಬಳಿ ಮುಕ್ತಾಯಗೊಂಡಿತು. ಯೋಧರ ಸ್ಮಾರಕದ ಬಳಿ ಪೂಜೆ ಸಲ್ಲಿಸುವುದರೊಂದಿಗೆ ಯಾತ್ರೆ ಕೊನೆಗೊಂಡಿತು.
ಸಹಸ್ರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು, ರಾಷ್ಟ್ರಪ್ರೇಮ ಮೆರೆದರು. ಬಿಜೆಪಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನ ಮುಖಂಡರು ಯಾತ್ರೆಯಿಂದ ದೂರವುಳಿದದ್ದು, ತೀವ್ರ ಟೀಕೆಗೆ ಒಳಗಾಯಿತು. ತಿರಂಗ ಯಾತ್ರೆ ಸಾಗಿ ಬರುತ್ತಿದ್ದಂತೆ ನಾಗರೀಕರು ಪುಷ್ಪವೃಷ್ಟಿ ನಡೆಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಗರದ ಕ್ಲಾಕ್ ಟವರ್ ಬಳಿ ಹಾದು ಬಂದಾಗ ಮುಸ್ಲೀಮರು ಸಹ ರಾಷ್ಟ್ರಧ್ವಜ ಹಿಡಿದು ಯಾತ್ರೆಗೆ ಸ್ವಾಗತ ಕೋರಿ, ಪುಷ್ಪಾರ್ಚನೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ತಮ್ಮ ಕಾರಿಗೆ ‘ಆಪರೇಷನ್ ಸಿಂದೂರ’ ಸ್ಟಿಕ್ಕರ್ ಅಂಟಿಸಿದ್ದರು.ಮಂಡ್ಯದಲ್ಲಿ ಬಾಳೇಹೊನ್ನೂರು ರಂಬಾಪುರಿ ಶಾಖಾಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು, ಮಾಜಿ ಸೈನಿಕರು, ವಿದ್ಯಾರ್ಥಿಗಳು ತಿರಂಗ ಯಾತ್ರೆ ನಡೆಸಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಯಾತ್ರೆ ನಡೆಸಿದರು.
ಬಳ್ಳಾರಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು, ಮಾಜಿ ಸೈನಿಕರು, ನಗರದ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ವಿದ್ಯಾರ್ಥಿಗಳು ಭಾಗವಹಿಸಿ, ದೇಶದ ವೀರಯೋಧರ ಪರ ಜಯಘೋಷ ಕೂಗಿದರು. ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ತಿರಂಗಾಯಾತ್ರೆ ಗವಿಯಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು.ಹೊಸಪೇಟೆಯಲ್ಲಿ ಶ್ರೀವಡಕರಾಯ ದೇವಸ್ಥಾನದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಯಾತ್ರೆ ನಡೆಯಿತು. ಕೊಪ್ಪಳದಲ್ಲಿ ಗಡಿಯಾರ ಕಂಬದ ಬಳಿ ತಿರಂಗಾ ಯಾತ್ರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳಿಕ್ಯಾತರ ಚಾಲನೆ ನೀಡಿದರು. ಜವಾಹರಲಾಲ್ ನೆಹರು ರಸ್ತೆಯುದ್ದಕ್ಕೂ ಸಾಗಿದ ತಿರಂಗಾ ಯಾತ್ರೆ ಅಶೋಕ ಸರ್ಕಲ್‌ನಲ್ಲಿ ಜಮಾವಣೆಗೊಂಡು ವಿಜಯೋತ್ಸವ ಆಚರಿಸಿತು.
ಇದೇ ವೇಳೆ, ಬೀದರ್, ಚಿತ್ರದುರ್ಗ, ಹುಬ್ಬಳ್ಳಿ, ರಾಮನಗರ, ರಾಯಚೂರು ಸೇರಿದಂತೆ ರಾಜ್ಯದ ಇತರೆಡೆಯೂ ಯಾತ್ರೆ ನಡೆಯಿತು.ಫೋಟೋ: ಬಳ್ಳಾರಿಯಲ್ಲಿ ನಡೆದ ತಿರಂಗಾ ಯಾತ್ರೆ.