ಸಾರಾಂಶ
ನರಸಿಂಹರಾಜಪುರ ತಾಲೂಕಿನ ಕಾನೂರು- ಕುದುರೆಗುಂಡಿ ರಸ್ತೆಯಲ್ಲಿ ಬಿದ್ದಿರುವ ಮರ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಕುದುರೆಗುಂಡಿ-ಕಾನೂರು ರಸ್ತೆ ಮಧ್ಯೆದಲ್ಲಿ ಮರವೊಂದು ಉರುಳಿದ್ದರಿಂದ ವಾಹನಗಳು ಬದಲಿ ಮಾರ್ಗವಾದ ಗುಡ್ಡೇಹಳ್ಳ, ಹೊಳೆ ಕೊಪ್ಪದ ಮೂಲಕ ಸಂಚರಿಸಿದವು.ಸೋಮವಾರ ರಾತ್ರಿ ಕುದುರೆಗುಂಡಿ-ಕಾನೂರು ರಸ್ತೆಯಲ್ಲಿ ಬರುವ ಕಪಿಲಾ ಹಳ್ಳದ ನೀರು ರಸ್ತೆಯ ಮೇಲೆ ಬಂದಿದ್ದರಿಂದ ಕೆಲವು ಸಮಯ ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು.
ಕಡಹಿನಬೈಲು ಗ್ರಾಪಂಯಲ್ಲಿ ಅತಿಯಾದ ಮಳೆಯಿಂದಾಗಿ ಮಂಜಿನಕೊಪ್ಪ, ಆಲಂದೂರು ಹಾಗೂ ಹಳ್ಳೂರು ಗದ್ದೆ ಸೇತುವೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ಗ್ರಾಪಂ ಸಿಬಂದ್ದಿಗಳು ಮಂಗಳವಾರ ತೆರವುಗೊಳಿಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.ಕರ್ಕೇಶ್ವರ ಗ್ರಾಮದ ಗುಬ್ಬೂರಿನ ಹರೀಶ್ ಅವರ ತೋಟದಲ್ಲಿ ಧರೆ ಕುಸಿತವಾಗಿದ್ದರಿಂದ ಅಡಿಕೆ ಮರಗಳಿಗೆ ಹಾನಿಯಾಗಿದ್ದು, ಹಳೇ ದಾನಿವಾಸ ಗ್ರಾಮದ ಮಕ್ಮುಲ್ ಎಂಬುವರ ಮನೆಯ ಗೋಡೆ ಕುಸಿದಿದೆ.
*ವಿದ್ಯುತ್ ಸ್ಥಗಿತ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಮರಗಳು ಉರುಳಿಬಿದ್ದು, ವಿದ್ಯುತ್ ಸಂಪರ್ಕದಲ್ಲಿ ಅಡೆತಡೆ ಉಂಟಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಬಿಎಸ್ಎನ್ಎಲ್ ಹಾಗೂ ಇತರ ಕಂಪನಿಯ ನೆಟ್ ವರ್ಕ್ ಕೈಕೊಡುತ್ತಿದೆ.