ಸಾರಾಂಶ
ವಿದೇಶದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕೊಡಿಸುವುದಾಗಿ ನಂಬಿಸಿ 8.50 ಲಕ್ಷ ರು. ವಂಚಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಉಡುಪಿ
ವಿದೇಶದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸೀಟು ಕೊಡಿಸುವುದಾಗಿ ನಂಬಿಸಿ 8.50 ಲಕ್ಷ ರು.ಗಳನ್ನು ವಂಚಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಹೊಸನಗರದ ಸುಮನ್ ಎಸ್. (24), ಬೆಳುವಾಯಿಯ ಸುಹಾನ್ ಖಾನ್(22) ಮತ್ತು ಮೊಹಮ್ಮದ್ ಮಹಾಝ್(23) ಎಂದು ಗುರುತಿಸಲಾಗಿದೆ.
ಉಡುಪಿಯ ಸಂತೋಷ್ ಎಂಬವರು ವೈದ್ಯನಾಗಿದ್ದು, ಉನ್ನತ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಬಯಸಿದ್ದರು. ಅವರು ಸೀಟು ಕೊಡಿಸುವುದಾಗಿ ಹೇಳಿದ ಆರೋಪಿಗಳ ಸೂಚನೆಯಂತೆ ದುಬೈಗೆ ತೆರಳಿ ಅಫ್ತಾಬ್ ಎಂಬಾತನನ್ನು ಭೇಟಿ ಮಾಡಿದ್ದು, ಸೀಟು ಪಡೆಯಲು 18 ಲಕ್ಷ ರು.ಗಳಿಗೆ ಒಪ್ಪಂದವಾಗಿತ್ತು. ಅದರಂತೆ ಸಂತೋಷ್ 8.50 ಲಕ್ಷ ರು.ಗಳನ್ನು ಮುಂಗಡ ಪಾವತಿಸಿದ್ದರು. ನಂತರ ಸೀಟನ್ನೂ ಕೊಡಿಸದೆ, ಆರೋಪಿಗಳು ಮೊಬೈಲ್ ಕರೆಗಳನ್ನೂ ಸ್ವೀಕರಿಸದೆ ವಂಚಿಸಿದ್ದಾಗಿ ಸಂತೋಷ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, 5 ಲಕ್ಷ ರು. ನಗದು, ಇನ್ನೋವಾ ಕಾರು ಮತ್ತು 2 ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆ ಪ್ರಭಾರ ಪಿಐ ರಾಮಚಂದ್ರ ನಾಯಕ್, ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಪುನೀತ್ ಕುಮಾರ್, ಭರತೇಶ್, ಸಿಬ್ಬಂದಿ ಚೇತನ್ ಕುಮಾರ್, ಬಶೀರ್, ಕಾರ್ತಿಕ್, ಸಂತೋಷ, ಶುಭಾ, ಸುಷ್ಮಾ, ನೇತ್ರಾವತಿ ಹಾಗೂ ಸೆನ್ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್, ವೆಂಕಟೇಶ್, ಧರ್ಮಪ್ಪ, ರಾಜೇಶ್, ನಿಲೇಶ್, ದೀಕ್ಷೀತ್, ಮಯ್ಯಪ್ಪರವರ ತಂಡ ಭಾಗವಹಿಸಿದೆ.