ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ವಿದ್ಯಾನಗರದಲ್ಲಿ ಸುಮಾರು ಎರಡು ವರ್ಷಗಳಿಂದ ಅನಧಿಕೃತವಾಗಿ ನಡೆಯುತ್ತಿದ್ದ ಸಿಟಿ ಸ್ಕ್ಯಾನ್ ಸೆಂಟರ್ ಮೇಲೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಬೀಗ ಮುದ್ರೆ ಹಾಕಿ ಸೆಂಟರ್ ಬಂದ್ ಮಾಡಿರುವ ಘಟನೆ ಶನಿವಾರ ನಡೆದಿದೆ.ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿಶ್ವನಾಥ ಭೋವಿ ನೇತೃತ್ವದ ತಂಡ, ಖಾಸಗಿ ಆಸ್ಪತ್ರೆಗಳ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಕೆಲವು ಆಸ್ಪತ್ರೆಗಳಲ್ಲಿ ನೂನ್ಯತೆಗಳು ಕಂಡು ಬಂದಿರುವ ಹಿನ್ನೆಲೆ ಜಿಲ್ಲಾ ಕಚೇರಿಗೆ ವರದಿ ಸಲ್ಲಿಸುವಂತೆ 10 ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಯಿತು.
ದಾಳಿ ನಂತರ ಸುದ್ದಿಗಾರರೊಂದಿಗೆ ಅಧಿಕಾರಿ ಡಾ. ವಿಶ್ವನಾಥ ಭೋವಿ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಹಿನ್ನೆಲೆ ಗೋಕಾಕ ಮತ್ತು ಮೂಡಲಗಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಮೂಡಲಗಿ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗಳ ದಾಖಲಾತಿ ಪರಿಶೀಲನೆ ನಡೆಸಿ, ಕೆಲವು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಸ್ಕ್ಯಾನ ಸೆಂಟರ ನೋಂದಣಿ ಇಲ್ಲದ್ದರಿಂದ ಅದನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.ಸಾಗರ ಪಾಟೀಲ ಅನಧಿಕೃತವಾಗಿ ನಡೆಸುತ್ತಿದ ಸ್ಕ್ಯಾನ್ ಸೆಂಟರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮಹಾರಾಷ್ಟ್ರದಲ್ಲಿ ಕೋರ್ಸ್ ಮಾಡಿದ್ದಾರೆ. ಕರ್ನಾಟಕದ ಪ್ಯಾರಾ ಮಡಿಕಲ್ ಬೋರ್ಡ್‌ನಲ್ಲಿ ನೋಂದಣಿ ಸಹ ಇಲ್ಲದಿರುವುದರಿಂದ ಸೀಜ್ ಮಾಡಲಾಗಿದ್ದು, ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಸಮಿತಿಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೀಜ್ ಮಾಡಿರುವ ಸ್ಕ್ಯಾನ ಸೆಂಟರ ಬಗ್ಗೆ ವರದಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಆರ್‌ಎಮ್‌ಪಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಶೀಘ್ರದಲ್ಲೇ ಎಲ್ಲಾ ಕ್ಲಿನಿಕಗಳ ಮೇಲೆ ದಾಳಿ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುವುದು. ಪರಿಶೀಲನೆ ವೇಳೆ ನಕಲಿ ಎಂಬುದು ಕಂಡು ಬಂದಲ್ಲಿ ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮುತ್ತಣ್ಣ ಕೊಪ್ಪದ, ಕೆಪಿಎಮ್‌ಇ ಕೇಸ್ ವರ್ಕರ್ ಮಂಜುನಾಥ ಬೀಸನೋಳ್ಳಿ, ಪಿಸಿಪಿಎನ್‌ಡಿಟಿ ಕೇಸ್ ವರ್ಕರ್ ಸುನೀಲ ವಡೆಯರ್,ಗೋಕಾಕದ ಬಿಪಿಎಮ್ ನೀತಿನ್ ಶಿಂಧೆ ಇದ್ದರು.