ಬಜೆಟ್ ತೃಪ್ತಿ ತಂದಿದೆ: ಶಿವರಾಮ ಹೆಬ್ಬಾರ

| Published : Feb 18 2024, 01:33 AM IST

ಸಾರಾಂಶ

ಬನವಾಸಿಯಲ್ಲಿ ಸರ್ಕಾರದಿಂದ ಆಚರಿಸಲ್ಪಡುವ ಕದಂಬೋತ್ಸವಕ್ಕೆ ಫೆ. ೫ರಂದು ಮುಖ್ಯಮಂತ್ರಿ ಬರಲು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಫೆ. ೫ ಮತ್ತು ೬ರಂದು ಆಚರಿಸಲಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ನನ್ನ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಆದ್ದರಿಂದ ಪ್ರಸಕ್ತ ಸಾಲಿನ ಬಜೆಟ್ ನನಗೆ ತೃಪ್ತಿ ತಂದಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.

ಅವರು ಶನಿವಾರ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಜೆಟ್‌ನಲ್ಲಿ ವಿಶೇಷವಾಗಿ ಕಿರವತ್ತಿಯ ಕೆರೆ ತುಂಬಿಸುವ ಯೋಜನೆಗೆ ₹೨೮೧ ಕೋಟಿ, ಮುಂಡಗೋಡನ ೧ನೆಯ ಪ್ರೊಜೆಕ್ಟ್‌ನಲ್ಲಿ ₹೨೭೫ ಕೋಟಿ ಯೋಜನೆಯಲ್ಲಿ ₹೯೧ ಕೋಟಿ ಬಿಡುಗಡೆ ಬಾಕಿ ಉಳಿದಿತ್ತು. ಅದನ್ನು ಬಿಡುಗಡೆಯ ಘೋಷಣೆ ಮಾಡಿದ್ದಾರೆ. ₹೨೮೧ ಕೋಟಿ ವೆಚ್ಚದಲ್ಲಿ ಮುಂಡಗೋಡ ತಾಲೂಕಿನ ಮೈನಳ್ಳಿ ಮತ್ತು ಗುಂಜಾವತಿ, ಯಲ್ಲಾಪುರ ತಾಲೂಕಿನ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೇಡ್ತಿ ನದಿ ನೀರು ಯೋಜನೆಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿದ್ದಾರೆ ಎಂದರು.

ಯಲ್ಲಾಪುರ ನಗರಕ್ಕೆ ಬೇಡ್ತಿ ನದಿಯಿಂದ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂಬ ಕಾರಣ ಮುಂದಿಟ್ಟು ನಗರವಾಸಿಗಳು ಗಲಾಟೆ ಮಾಡಿದ್ದರಿಂದ ಕಳೆದ ೭ ವರ್ಷದ ಹಿಂದೆಯೇ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಸದ್ಯ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಯಲ್ಲಾಪುರ ಪಟ್ಟಣಕ್ಕೆ ₹೯೬ ಕೋಟಿ ವೆಚ್ಚದಲ್ಲಿ ಅಮೃತ್-೨ ಯೋಜನೆಯಲ್ಲಿ ಕಾಳಿ ನದಿ ಹಿನ್ನೀರು ಪ್ರದೇಶ ಬೊಮ್ಮನಳ್ಳಿಯಿಂದ ನೀರು ಪೂರೈಕೆ ಯೋಜನೆಗೂ ಟೆಂಡರ್ ಆಗಿದೆ. ಕೆಲ ತಾಂತ್ರಿಕ ಸಮಸ್ಯೆಯಿದ್ದು, ಸದು ಸದ್ಯದಲ್ಲಿಯೇ ಬಗೆಹರಿಯಲಿದೆ. ನನ್ನ ಕ್ಷೇತ್ರದ ಅಭಿವೃದ್ಧಿ ಯೋಜನೆಯ ಬೇಡಿಕೆಯನ್ನು ಮನ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಅಭಿನಂದಿಸುತ್ತೇನೆ ಎಂದರು.

ಫೆ. ೫, ೬ ಕದಂಬೋತ್ಸವ:

ಬನವಾಸಿಯಲ್ಲಿ ಸರ್ಕಾರದಿಂದ ಆಚರಿಸಲ್ಪಡುವ ಕದಂಬೋತ್ಸವಕ್ಕೆ ಫೆ. ೫ರಂದು ಮುಖ್ಯಮಂತ್ರಿ ಬರಲು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಫೆ. ೫ ಮತ್ತು ೬ರಂದು ಆಚರಿಸಲಾಗುತ್ತಿದ್ದು, ಇದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಜತೆಯೂ ಚರ್ಚೆ ನಡೆಸಿದ್ದೇನೆ. ಪಂಪ ಪ್ರಶಸ್ತಿಯು ನಾ. ಡಿಸೋಜಾ ಅವರಿಗೆ ಕದಂಬೋತ್ಸವ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು ಎಂದರು.

ಎಸ್.ಟಿ. ಸೋಮಶೇಖರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ಬಾರ್, ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್ ಅಭ್ಯರ್ಥಿ ಜತೆ ಪ್ರಚಾರಕ್ಕೆ ತೆರಳಲು ಮನಸ್ಸಿಲ್ಲ. ಅಲ್ಲದೇ ಜೆಡಿಎಸ್ ಅಭ್ಯರ್ಥಿಯೂ ಕರೆದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಸೋಮಶೇಖರ ಸ್ನೇಹಿತ ಎಂದಾಕ್ಷಣ ಎಲ್ಲ ಘಟನೆಗೂ ನನಗೆ ಸಂಬಂಧವಿಲ್ಲ ಎಂದು ಹೇಳಿದರು.ಸಾರ್ವಜನಿಕ ಚರ್ಚೆ ನಡೆಯುತ್ತಿರಲಿ:

ಕಾಂಗ್ರೆಸ್ ಸೇರ್ಪಡೆಯಾಗುವ ವದಂತಿ ಹಬ್ಬುತ್ತಿದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಹೇಳಿಲ್ಲ. ಎಲ್ಲವೂ ಚರ್ಚೆ ನಡೆಯುತ್ತಲೇ ಇರುತ್ತದೆ. ಸಾರ್ವಜನಿಕ ಚರ್ಚೆ ನಡೆಯುತ್ತಿರಲಿ. ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ಊಹೆ ಮಾಡಿದವರ ಊಹೆಗೆ ಬಿಟ್ಟಿದ್ದೇನೆ ಎಂದರು.