ಸಾರಾಂಶ
ಭೂಮಿತಾಯಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಉಡಿ ತುಂಬುವ ಹಬ್ಬ ಸೀಗೆ ಹುಣ್ಣಿಮೆಯನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರೈತರು ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಭೂಮಿತಾಯಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಉಡಿ ತುಂಬುವ ಹಬ್ಬ ಸೀಗೆ ಹುಣ್ಣಿಮೆಯನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರೈತರು ಸಂಭ್ರಮದಿಂದ ಆಚರಿಸಿದರು.ಭೂತಾಯಿಗೆ ಪೂಜೆ ಮಾಡಿ ಚರಗ ಚೆಲ್ಲುವ ಸೀಗಿ ಹುಣ್ಣಿಮೆ ರೈತರ ಸಂಭ್ರಮದ ಹಬ್ಬ. ವರ್ಷರ್ವಿಡೀ ಕಷ್ಟಪಟ್ಟು ಬೆಳೆದ ಫಸಲನ್ನು ಪೂಜೆ ಮಾಡಿ, ಹಸಿರು ಸೀರೆಯುಟ್ಟ ಭೂತಾಯಿಯನ್ನು ಆರಾಧಿಸುವ ಶುಭ ಘಳಿಗೆ.
ರೈತ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಭೂಮಿಗೆ ತೆರಳಿ ಭೂಮಿತಾಯಿ ಜತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿದರು. ಭೂತಾಯಿಯ ಸೀಮಂತ ಕಾರ್ಯಕ್ಕೆ ಜೋಳದ ಕಡುಬು, ವಡೆ, ಮೊಸರು, ಪುಂಡಿಪಲ್ಯೆ, ಕಾಳಿನ ಪಲ್ಯೆ, ಮೆಣಸಿನಕಾಯಿ, ಚಟ್ನಿ, ಮೊಸರು, ಹುರಕ್ಕಿ ಹೋಳಿಗೆ, ಚಪಾತಿ, ಶೇಂಗಾಚಟ್ನಿ, ಕುಂಬಳ ಪಲ್ಯೆ, ಬದನೆ ಪಲ್ಯೆ, ಚವಳಿ ಪಲ್ಯೆ, ಅನ್ನದ ಬಾನ, ಮಡಿಕೆಕಾಳು ಪಲ್ಯೆ, ಕಿಚಡಿ ತಯಾರಿಸಿ ಎಡೆ ಹಿಡಿದು ಚರಗ ಚೆಲ್ಲುವುದು ವಿಶೇಷವಾಗಿತ್ತು.ಗ್ರಾಮೀಣ ಭಾಗದಲ್ಲಿ ಸೀಗೆ ಹುಣ್ಣಿಮೆಯನ್ನು ಹಿಂದು-ಮುಸ್ಲಿಮರು ಒಟ್ಟಾಗಿ ಆಚರಿಸಿ ಭೋಜನ ಸವಿದ ನಂತರ ಹಿರಿಯರು ತಾಂಬೂಲ ತಿನ್ನುತ್ತ ಮರದ ನೆರಳಲ್ಲಿ ವಿಶ್ರಾಂತಿ ಪಡೆದರು. ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಜಮೀನುಗಳಲ್ಲಿ ನೀರು ಹರಿಯುತ್ತಿರುವ ಕಾರಣ ಬಹುತೇಕ ಗ್ರಾಮಗಳಲ್ಲಿ ಈ ಬಾರಿ ಸೀಗೆ ಹುಣ್ಣಿಗೆ ಸಂಭ್ರಮ ಕಳೆಗುಂದಿತ್ತು. ಹಳ್ಳಕೊಳ್ಳಗಳು ತುಂಬಿಹರಿಯುತ್ತಿರುವ ಕಾರಣ ಮಕ್ಕಳು, ಮಹಿಳೆಯರು ಮನೆಯಲ್ಲಿಯೇ ಉಳಿದುಕೊಂಡರು. ಪುರುಷರು ಮಾತ್ರ ಜಮೀನಿಗೆ ಹೋಗಿ ಎಡೆಹಿಡಿದು ಚರಗ ಚೆಲ್ಲಿದರು. ಮಕ್ಕಳು ಜಮೀನುಗಳಲ್ಲಿ ಗಾಳಿಪಟ ಹಾರಿಸುವ ಸಂಭ್ರಮ ಅಪರೂಪವಾಗಿತ್ತು.
17ಬಿಎಲ್‌ಎಚ್3