ಸಾರಾಂಶ
ತಾಲೂಕು ಆಡಳಿತ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಲಹೆಕನ್ನಡಪ್ರಭ ವಾರ್ತೆ ಮಾಗಡಿ
ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ತಹಸೀಲ್ದಾರ್ ಶರತ್ ಕುಮಾರ್ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಚಿಕ್ಕ ಮಕ್ಕಳಿಗೆ ಕಥೆ ಹೇಳುವಾಗ ರಾಮಾಯಣ ಕಥೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ. ರಾಮಾಯಣ ಕಥೆಯಲ್ಲಿ ತಂದೆ ತಾಯಿಗೆ ಗೌರವ ಕೊಡುವುದು, ಗಂಡ ಹೆಂಡತಿ ಸಂಬಂಧ, ಅಣ್ಣ ತಮ್ಮಂದಿರ ಸಂಬಂಧದ ಬಗ್ಗೆ ಹೆಚ್ಚು ಮಹತ್ವ ನೀಡಲಾಗಿದೆ. ಇಂತಹ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿಯವರ ಆದರ್ಶ ನಾವು ಪಾಲಿಸಬೇಕಿದೆ. ಮುಂದಿನ ಪೀಳಿಗೆಗೆ ನಮ್ಮ ಕಲೆ, ಸಂಸ್ಕೃತಿ, ಮೌಲ್ಯ ತಿಳಿಸಿಕೊಡಬೇಕಾಗಿದೆ. ನಮ್ಮ ದೇಶದ ಮೇಲೆ ಸಾಕಷ್ಟು ಬಾರಿ ದಾಳಿಯಾಗಿದ್ದರೂ ನಮ್ಮ ಸಂಸ್ಕೃತಿಯ ಬುನಾದಿ ಗಟ್ಟಿಯಾಗಿದ್ದು ಹಿಂದಿನ ಮಹನೀಯರು ಹಾಕಿಕೊಟ್ಟ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ವಾಲ್ಮೀಕಿ ರಚಿಸಿರುವ ತುಂಬಾ ಶ್ರೇಷ್ಠ ಮಹಾಕಾವ್ಯ ಎಂದು ಹೇಳಿದರು.
ತಾಪಂ ಇಒ ಜೈಪಾಲ್ ಮಾತನಾಡಿ, ವಾಲ್ಮೀಕಿ ಮಹಾಋಷಿಗಳು ರಚಿಸಿರುವ ಮಹಾ ಗ್ರಂಥ ರಾಮಾಯಣ ಹಿಂದುಗಳಿಗೆ ಪವಿತ್ರ ಗ್ರಂಥ. ಇಂತಹ ಮಹನೀಯರ ಜಯಂತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಅವರಿಗೆ ನಾವು ಸಮಾಜದಲ್ಲಿ ಗೌರವ ಕೊಟ್ಟಂತಾಗುತ್ತದೆ. ದೇಶಕ್ಕೆ ಪವಿತ್ರ ಗ್ರಂಥ ನೀಡಿದ ವಾಲ್ಮೀಕಿ ಮಹರ್ಷಿಗೆ ಪ್ರತಿಯೊಬ್ಬರೂ ಕೃತಜ್ಞತೆ ಅರ್ಪಿಸಬೇಕಿದೆ ಎಂದು ತಿಳಿಸಿದರು.ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಪ್ರಕಾಶ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಕೆಬ್ಬೆಪಾಳ್ಯ ನಾಗರಾಜು, ಪಿಎಸ್ಐ ಬಸವರಾಜು, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಜಯಶ್ರೀ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಮುಖಂಡರಾದ ಮಾಡಬಾಳ್ ಜಯರಾಮ್, ದೊಡ್ಡಿ ಲಕ್ಷ್ಮಣ್, ಕುದೂರು ಮಂಜೇಶ್, ಕಲ್ಕೆರೆ ಶಿವಣ್ಣ, ವನಜ, ಕಲ್ಯಾಗೇಟ್ ಬಸವರಾಜು ಇತರ ಮುಖಂಡರು ಭಾಗವಹಿಸಿದ್ದರು.