ಮಹನೀಯರನ್ನು ಜಾತಿ ಆಧಾರಡಿ ಗುರುತಿಸಬೇಡಿ: ತಹಸೀಲ್ದಾರ್ ಶಿವಕುಮಾರ್‌

| Published : Oct 18 2024, 01:23 AM IST

ಮಹನೀಯರನ್ನು ಜಾತಿ ಆಧಾರಡಿ ಗುರುತಿಸಬೇಡಿ: ತಹಸೀಲ್ದಾರ್ ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾರೋಹಳ್ಳಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿಯನ್ನು ನಾಯಕ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

-ಹಾರೋಹಳ್ಳಿ ತಾಲೂಕು ಆಡಳಿತ, ನಾಯಕ ಸಮುದಾಯದ ಸಹಯೋಗದಲ್ಲಿ ವಾಲ್ಮೀಕಿ ಜಯಂತಿ

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿಯನ್ನು ನಾಯಕ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ಬಸ್‌ನಿಲ್ದಾಣದಿಂದ ವಾಲ್ಮೀಕಿ ಮಹರ್ಷಿಯ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಚಾಮುಂಡೇಶ್ವರಿ ದೇವಾಲಯ ತಲುಪಿ ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.

ತಹಸೀಲ್ದಾರ್ ಶಿವಕುಮಾರ್‌ ಮಾತನಾಡಿ, ವಾಲ್ಮೀಕಿಯನ್ನು ಮೊದಲ ಕವಿ ಅಥವಾ ಆದಿ ಕವಿ ಮತ್ತು ರಾಮಾಯಣದ ಗ್ರಂಥ ಕತೃ ಮೊದಲ ಮಹಾಕಾವ್ಯ ಎಂದು ಪೂಜಿಸಲಾಗುತ್ತಿದೆ, ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ದುಡಿದ ಮಹನೀಯರನ್ನು ಜಾತಿ ಆಧಾರದಲ್ಲಿ ಗುರುತಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ಧರ್ಮ ಮತ್ತು ಕಾನೂನು ಒಂದೇ ಮುಖದ ನಾಣ್ಯವಿದ್ದಂತೆ. ಧರ್ಮ ಗ್ರಂಥಗಳು ಮನುಷ್ಯನಿಗೆ ಮಾನವೀಯ ಮೌಲ್ಯವನ್ನು ಕಲಿಸುತ್ತವೆ. ಅದೇ ರೀತಿ ಸಂವಿಧಾನ ಕಾನೂನುಗಳು ಮನಷ್ಯನಿಗೆ ಬದುಕಲು ಬೇಕಾಗಿರುವ ಕಾಯ್ದೆಗಳನ್ನು ರೂಪಿಸುತ್ತದೆ. ಈಗಾಗಲೇ ಬಹುತೇಕ ಮುಖಂಡರು ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಭವನಗಳ ನಿರ್ಮಾಣಕ್ಕೆ ಜಾಗ ಗುರ್ತಿಸಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡೋಣ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕೋಟೆ ಕುಮಾರ್ ಮಾತನಾಡಿ, ಹಾರೋಹಳ್ಳಿ ನೂತನ ತಾಲೂಕ್ಕಾಗಿ 2 ವರ್ಷ ಸಂದಿವೆ. ಮಹನೀಯರ ಜಯಂತಿ ಆಚರಣೆಗೆ ಸರ್ಕಾರಿ ಅಧಿಕಾರಿಗಳು ಗೈರುಹಾಜರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ವಾಲ್ಮೀಕಿ ಮಹರ್ಷಿಯು ಒಬ್ಬ ಕೆಳ ಸಮುದಾಯದ ವ್ಯಕ್ತಿಯಾಗಿ ರಾಮಾಯಣ ಗ್ರಂಥ ಬರೆಯುವ ಮೂಲಕ ಸಮಾಜಕ್ಕೆ ಮಾದರಿ ಸಂದೇಶವನ್ನು ಸಾರಿದ್ದಾರೆ. ಪ್ರಸ್ತುತವಾಗಿ ಕೆಳ ಸಮುದಾಯದ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಶಿಕ್ಷಕ ಪರಮೇಶ್ ಸಂಪನ್ಮೂಲ ವ್ಯಕ್ತಿಯಾಗಿ ಮಹರ್ಷಿ ವಾಲ್ಮೀಕಯವರ ಜೀವನ ಚರಿತ್ರೆಯನ್ನು ವಿವರಿಸಿದರು. ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಬಾಯಿ, ಮುಖಂಡರಾದ ಬನಶಂಕರಿ ನಾಗು, ರುದ್ರೇಶ್, ಮರಳವಾಡಿ ಮಂಜುನಾಥ್, ಚಂದ್ರು, ರವಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಯಶೋಧಮ್ಮ, ಶಶಿಕಲಾ, ತೋಕಸಂದ್ರ ಪ್ರೇಮಕುಮಾರಿ, ಸೇರಿದಂತೆ ಹಾರೋಹಳ್ಳಿ, ಮರಳವಾಡಿ ಹೋಬಳಿಯ ನಾಯಕ ಸಮುದಾಯದವರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.